

ಶಿವಮೊಗ್ಗ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದುಳಿದ ವರ್ಗಗಳ 312 ಕೋಟಿ ರೂ. ಹಿಂಪಡೆದು 1,093 ಕಾಮಗಾರಿಗಳಿಗೆ ಕತ್ತರಿ ಹಾಕಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
ಮುಖ್ಯಮಂತ್ರಿ ಆದೇಶದ ಮೇರೆಗೆ ಅನುದಾನ ಹಿಂಪಡೆದಿರುವುದು ಕಂಡುಬಂದಿದೆ. ಆ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೋ ಅಥವಾ ಇನ್ಯಾವುದಕ್ಕೆ ಬಳಸಿದ್ದಾರೋ ಗೊತ್ತಿಲ್ಲ. ಆದರೆ ಸಾವಿರಾರು ಕಾಮಗಾರಿ ಸ್ಥಗಿತಗೊಳಿಸಿ ಅನುದಾನ ಹಿಂಪಡೆದಿರುವುದು ದುರದೃಷ್ಟಕರ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಹಿಂದ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅನ್ಯಾಯ ಮಾಡಿದ್ದಾರೆ. ತಕ್ಷಣವೇ ಸಿಎಂ ಈ ಬಗ್ಗೆ ಗಮನ ಹರಿಸಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸರ್ಕಾರವೇ ಜೀವಂತವಾಗಿಲ್ಲ. ಅತಿವೃಷ್ಟಿಯಿಂದ ರೈತರು ತೊಂದರೆಯಲ್ಲಿದ್ದು, ಪರಿಹಾರ ನೀಡುತ್ತಿಲ್ಲ. ಬೆಳೆನಷ್ಟವಾಗಿ ಕಣ್ಣೀರಿಡುತ್ತಿದ್ದರೂ ಗಮನ ಹರಿಸುತ್ತಿಲ್ಲ. ಬಿಜೆಪಿ ಸರ್ಕಾರದ ಅವಧಿಯ ಎಲ್ಲ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಮತ್ತೊಂದೆಡೆ ಹೊಸ ಕಾಮಗಾರಿಗಳಿಗೂ ಅನುದಾನ ನೀಡುತ್ತಿಲ್ಲ. ಬಿಜೆಪಿ ವಿರುದ್ಧ ಟೀಕೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖರಾದ ಎಂ.ಶಂಕರ್, ಇ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಆ.ಮ.ಪ್ರಕಾಶ್, ಶಂಕರ್ ಗನ್ನಿ, ನಾಗರಾಜಯ್ಯ ಸುದ್ದಿಗೋಷ್ಠಿಯಲ್ಲಿದ್ದರು.