ಸರ್ಕಾರಿ ಕೆಲ್ಸ ಆಕಾಂಕ್ಷಿಗಳಿಗೆ ತ್ರಾಸ: ಆರ್ಥಿಕ ನೆಪ ಮುಂದಿಟ್ಟುಕೊಂಡು ನೇಮಕಾತಿಗಳ ಅಧಿಸೂಚನೆಯೇ ರದ್ದು

Job
Published on

ಮಹಾಮಾರಿ ಕರೊನಾದಿಂದಾಗಿ ಎಲ್ಲೆಲ್ಲೂ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಇದನ್ನೇ ನೆಪ ಮಾಡಿಕೊಂಡ ರಾಜ್ಯ ಸರ್ಕಾರ ಕಳೆದ ವರ್ಷ ವಿವಿಧ ನೇಮಕಾತಿಗಳಿಗೆ ಹೊರಡಿಸಿದ್ದ ಅಧಿಸೂಚನೆಗಳನ್ನೇ ರದ್ದು ಮಾಡಿದೆ. ಸರ್ಕಾರಿ ಹುದ್ದೆ ಪಡೆಯಲು ಹಗಲಿರುಳು ಶ್ರಮಪಟ್ಟು ಓದಿ, ಪರೀಕ್ಷೆ ಮುಗಿಸಿ ಸಂದರ್ಶನಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳು ಈ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ವಯೋಮಿತಿ ಮೀರಿದರೆ ತಮ್ಮ ಭವಿಷ್ಯವೇನೆಂಬುದು ಇವರೆಲ್ಲರ ಚಿಂತೆ. ಈ ಕುರಿತು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿದ್ದ ಹಲವಾರು ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿ ನಮ್ಮ ವರದಿಗಾರರಾದ ಗಿರೀಶ ಗರಗ ಹಾಗೂ ಬೇಲೂರು ಹರೀಶ್ ಈ ವರದಿ ಸಿದ್ಧಪಡಿಸಿದ್ದಾರೆ.

ಬೆಂಗಳೂರು: ಆರ್ಥಿಕತೆ, ಕೈಗಾರಿಕೆ, ರಿಯಲ್ ಎಸ್ಟೇಟ್ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳ ಮೇಲೆ ಕಾಮೋಡ ಕವಿಸಿರುವ ಕರೊನಾ ಮಹಾಮಾರಿ ಸರ್ಕಾರಿ ಹುದ್ದೆಯ ಕನಸು ಕಾಣುತ್ತ ಸಂದರ್ಶನಕ್ಕೆ ಅಣಿಯಾಗಿದ್ದ ಲಕ್ಷಾಂತರ

ಯುವಕರ ಆಸೆಗೂ ತಣ್ಣೀರೆರಚಿದೆ. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್), ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್​ಸಿಎಲ್), ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಹಾಗೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಆರ್ಥಿಕ ನಷ್ಟದ ಜತೆಗೆ ಆಡಳಿತಾತ್ಮಕ ಕಾರಣ ನೀಡಿ ವಿವಿಧ ನೇಮಕಾತಿಗಳನ್ನೇ ರದ್ದುಪಡಿಸಿವೆ. ಕೆಲವು ಸಂಸ್ಥೆಗಳು ಪರೀಕ್ಷಾ ಶುಲ್ಕ ವಾಪಸ್ ನೀಡುವ ಭರವಸೆ ಕೊಟ್ಟಿವೆಯಾದರೂ ವಯೋಮಿತಿ ದಾಟುತ್ತಿರುವ ಲಕ್ಷಾಂತರ ಅಭ್ಯರ್ಥಿಗಳು ಭವಿಷ್ಯವೇನೆಂಬುದೇ ಸದ್ಯದ ಚಿಂತೆಯಾಗಿದೆ.

‘ಖಾಸಗಿ ಉದ್ಯೋಗಕ್ಕೆ ತೆರಳದೆ 2011ರಿಂದಲೂ ಸಹಾಯಕ ಇಂಜಿನಿಯರ್ ಹುದ್ದೆ ಪಡೆಯಲು ಪರೀಕ್ಷೆ ತೆಗೆದುಕೊಂಡು ಓದುತ್ತಿದ್ದೇನೆ. ಆದರೆ, ಕರೊನಾ ನೆಪವೊಡ್ಡಿ ನೇಮಕಾತಿ ಅಧಿಸೂಚನೆ ರದ್ದು ಮಾಡಲಾಗಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಇತ್ತ ಖಾಸಗಿ ಉದ್ಯೋಗ ಸಿಗದೆ ಅತ್ತ ಸರ್ಕಾರಿ ಹುದ್ದೆ ಸಿಗದೆ ಕಂಗಲಾಗಿದ್ದೇವೆ. ಹಾಗಾಗಿ, ಈ ಬಗ್ಗೆ ಸರ್ಕಾರವು ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ತೀರ್ಥಹಳ್ಳಿ ತಾಲೂಕಿನ ಪವನ್ ವಿಜಯವಾಣಿ ಎದುರು ಅಳಲು ತೊಡಿಕೊಂಡಿದ್ದಾರೆ.

ಕೆಎಟಿಗೆ ಪಿಡಬ್ಲ್ಯುಡಿ ಕೇಸ್: 300 ಕಿರಿಯ ಹಾಗೂ 570 ಸಹಾಯಕ ಇಂಜಿನಿಯರ್ ಸೇರಿ 870 ಹುದ್ದೆ ನೇಮಕ ಸಂಬಂಧ 2019ರ ಏಪ್ರಿಲ್​ನಲ್ಲಿ ಲೋಕೋಪಯೋಗಿ ಇಲಾಖೆ ಅಧಿಸೂಚನೆ ಹೊರಡಿಸಿತ್ತು. 2019ರ ಜೂನ್​ನಲ್ಲಿ ಪರೀಕ್ಷೆ ನಡೆದು ಫಲಿತಾಂಶವೂ ಪ್ರಕಟವಾಗಿತ್ತು. ಆದರೆ, ಸರ್ಕಾರ ಬದಲಾದ ನಂತರದಲ್ಲಿ ನೇಮಕಾತಿ ಅಧಿಸೂಚನೆ ರದ್ದು ಆಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ (ಕೆಎಸ್​ಎಟಿ) ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಅರ್ಜಿ ವಿಚಾರಣೆ ನಡೆಯುತ್ತಿದೆ.

ಪರೀಕ್ಷೆ ಸರಿಯಿಲ್ಲ ಎಂದ ಕೆಪಿಸಿಎಲ್

ಕಾರ್ಯನಿರ್ವಾಹಕ ಇಂಜಿನಿಯರ್ (ಇಇ) ಹಾಗೂ ಕಿರಿಯ ಇಂಜಿನಿಯರ್ (ಜೆಇ) ಹುದ್ದೆ ಸೇರಿ ಒಟ್ಟು 468 ಹುದ್ದೆಗಳ ನೇಮಕಾತಿ ಸಂಬಂಧ ಕೆಪಿಸಿಎಲ್ 2017ರ ಮೇನಲ್ಲಿ ಅಧಿಸೂಚನೆ ಹೊರಡಿಸಿತ್ತು. 2018ರ ಜನವರಿಯಲ್ಲಿ ಪರೀಕ್ಷೆಯೂ ನಡೆಸಿದೆ. ಪರೀಕ್ಷೆ ಸೂಕ್ತ ರೀತಿಯಲ್ಲಿ ನಡೆದಿಲ್ಲ ಎಂಬ ಕಾರಣ ನೀಡಿ ಕೆಪಿಸಿಎಲ್ ಅಧಿಸೂಚನೆಯನ್ನೇ ರದ್ದು ಮಾಡಿದೆ.

ಎಲ್ಲೆಲ್ಲಿ ನೇಮಕ ರದ್ದು

1. ಪಿಡಬ್ಲ್ಯುಡಿ

2. ಕೆಪಿಟಿಸಿಎಲ್

3. ಬಿಎಂಆರ್​ಸಿಎಲ್

4. ಕೆಪಿಸಿಎಲ್

5. ಕೆಪಿಎಸ್ಸಿ

ದಾಖಲಾತಿ ಪರಿಶೀಲನೆ, ಕರ್ತವ್ಯಕ್ಕೆ ಹಾಜರಾಗಲು ನೀಡಿರುವ ಆದೇಶವೂ ಸೇರಿ ಎಲ್ಲ ಪ್ರಕ್ರಿಯೆಗೂ ತಡೆಯೊಡ್ಡಲಾಗಿದೆ. ಈ ಕ್ರಮದಿಂದ 2017-18ನೇ ಸಾಲಿನಲ್ಲಿ ಪರೀಕ್ಷೆ ಬರೆದು ಎಫ್​ಡಿಎ ಹಾಗೂ ಎಸ್​ಡಿಎ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ. | ಎನ್.ಡಿ.ಕಿಶೋರ್​ಕುಮಾರ್ ಆಯ್ಕೆಯಾದ ಅಭ್ಯರ್ಥಿ

ಕೆಪಿಟಿಸಿಎಲ್ ಕರೆಂಟ್ ಶಾಕ್

500 ಸಹಾಯಕ ಇಂಜಿನಿಯರ್ (ವಿದ್ಯುತ್), 28 ಸಹಾಯಕ ಇಂಜಿನಿಯರ್ (ಸಿವಿಲ್), 570 ಕಿರಿಯ ಇಂಜಿನಿಯರ್ (ವಿದ್ಯುತ್), 29 ಕಿರಿಯ ಇಂಜಿನಿಯರ್ (ಸಿವಿಲ್), 67 ಕಿರಿಯ ಆಪ್ತ ಸಹಾಯಕ ಹಾಗೂ 36 ಕಿರಿಯ ಸಹಾಯಕ ಸೇರಿ ಒಟ್ಟು 1559 ಹುದ್ದೆಗಳ ನೇಮಕಾತಿ ಸಂಬಂಧ ಕೆಪಿಟಿಸಿಎಲ್ 2019ರ ಜೂನ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಪ್ರತಿ ಅರ್ಜಿಗೆ 500 ರೂ.ನಂತೆ ಶುಲ್ಕ ಭರಿಸಿ ಅಂದಾಜು 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಹೊರ ರಾಜ್ಯದ ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಸಲಾಗಿದೆ. ಆದರೆ, ಈಗಿನವರೆಗೂ ಮುಖ್ಯ ಪರೀಕ್ಷೆಗಳನ್ನು ನಡೆಸಿಲ್ಲ. 2020ರ ನ.21ರಂದು ಆಡಳಿತಾತ್ಮಕ ಕಾರಣದಿಂದ ಕೆಪಿಟಿಸಿಎಲ್ ಅಧಿಸೂಚನೆ ರದ್ದುಪಡಿಸಿದೆ.

ಬಿಎಂಆರ್​ಸಿಎಲ್​ನಲ್ಲೇನು?

134 ಮೇಂಟೆನರ್, 21 ಜ್ಯೂನಿಯರ್ ಇಂಜಿನಿಯರ್ ಹಾಗೂ 19 ಸೆಕ್ಷನ್ ಇಂಜಿನಿಯರ್ ಸೇರಿ ಒಟ್ಟು 174 ಹುದ್ದೆ ನೇಮಕಾತಿ ಸಂಬಂಧ 2019ರ ಜ.3ರಂದು ಬಿಎಂಆರ್​ಸಿಎಲ್ ಅಧಿಸೂಚನೆ ಹೊರಡಿಸಿತ್ತು. 2019ರ ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದೆ. ಆದರೆ, ಈವರೆಗೂ ಅಭ್ಯರ್ಥಿಗಳ ಆಯ್ಕೆ ಪಟ್ಟಿ, ಸಂದರ್ಶನ ನಡೆದಿಲ್ಲ. ಆಡಳಿತಾತ್ಮಕ ಕಾರಣ ನೀಡಿ 2020ರ ಅ.30ರಂದು ಅಧಿಸೂಚನೆ ರದ್ದುಗೊಳಿಸಿದೆ. ಅಭ್ಯರ್ಥಿಗಳು ಭರಿಸಿದ ಶುಲ್ಕವನ್ನು ಮತ್ತೆ ವಾಪಸ್ ನೀಡಲಾಗುವುದೆಂದು ಬಿಎಂಆರ್​ಸಿಎಲ್ ಭರವಸೆ ನೀಡಿದೆ.

ಎಫ್​ಡಿಎ, ಎಸ್​ಡಿಎ ಕನಸು ಭಗ್ನ

2017-18ನೇ ಸಾಲಿನಲ್ಲಿ ಎಫ್​ಡಿಎ ಮತ್ತು ಎಸ್​ಡಿಎನ 1,812 ಹುದ್ದೆಗಳಿಗಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹುದ್ದೆಗಳಿಗಾಗಿ 2017-18ರಲ್ಲೇ ಎರಡು ಬಾರಿ ಅಧಿ ಸೂಚನೆ ಹೊರಡಿಸಲಾಗಿತ್ತು. ಅದರಂತೆ 2017ರ ಸೆ.1ರಂದು ಮೊದಲು 507 ಎಫ್​ಡಿಎ ಮತ್ತು 551 ಎಸ್​ಡಿಎ ಹಾಗೂ 2017ರ ನ.24ರಂದು 454 ಎಫ್​ಡಿಎ ಹಾಗೂ 300 ಎಸ್​ಡಿಎ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಸೂಚಿಸಿ ಕೆಪಿಎಸ್ಸಿ ಪ್ರಕಟಣೆ ಹೊರಡಿಸಿತ್ತು. ಒಟ್ಟು 1,812 ಹುದ್ದೆಗಳಿಗೆ 2018ರ ಫೆ.11ರಿಂದ 25ರವರೆಗೆ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ನಂತರ ಅಂಕಗಳ ಆಧಾರದ ಮೇಲೆ 2019ರ ಫೆಬ್ರವರಿಯಿಂದ ಏಪ್ರಿಲ್​ವರೆಗೆ ಮೂಲ ದಾಖಲೆ ಪರಿಶೀಲಿಸಲಾಗಿದೆ. ಈ ಎಲ್ಲ ಪ್ರಕ್ರಿಯೆ ನಂತರದ 2 ವರ್ಷ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿತ್ತು. 2020ರ ಜನವರಿಯಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಿ, ಜುಲೈನಲ್ಲಿ ಅಂತಿಮ ಆಯ್ಕೆಪಟ್ಟಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆಗೊಳಿಸಿ ಕರ್ತವ್ಯಕ್ಕೆ ಹಾಜರಾಗು ವಂತೆಯೇ ಸೂಚಿಸಲಾಗಿತ್ತು. ಆದರೆ, ನೇಮಕಾತಿಗೆ ತಡೆಯೊಡ್ಡಲಾಗಿದೆ.

ಕಟ್ಟಿದ ಶುಲ್ಕವೂ ವಾಪಸ್ ಇಲ್ಲ

ಅಭ್ಯರ್ಥಿಗಳು ಪ್ರತಿ ಅರ್ಜಿಗೆ 500 ರೂ.ನಂತೆ ಶುಲ್ಕ ಕಟ್ಟಿ ವಿವಿಧ ಹುದ್ದೆಗಳಿಗೆ ಐದಾರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪರೀಕ್ಷೆ ಬರೆದು ಫಲಿತಾಂಶ ಪ್ರಕಟವಾದರೂ ಅನ್ಯ ಕಾರಣವೊಡ್ಡಿ ಅಧಿಸೂಚನೆ ರದ್ದು ಮಾಡಲಾಗಿದೆ. ಇದೀಗ ಶುಲ್ಕ ಕಟ್ಟಿರುವ ಹಣವೂ ವಾಪಸ್ ಸಿಗದೆ ಇತ್ತ ಉದ್ಯೋಗವೂ ಸಿಗದೆ ಅಭ್ಯರ್ಥಿಗಳು ಪರದಾಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net