

ಬನ್ನಿಕುಪ್ಪೆ: ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆ ದೇಶವ್ಯಾಪಿ ಜನಪ್ರಿಯತೆಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪ್ರಭಾವಿತರಾಗಿ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಟೀಕಿಸಿದರು.
ಬನ್ನಿಕುಪ್ಪೆ ಗ್ರಾಮದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮತಯಾಚಿಸಿ ಮಾತನಾಡಿದ ಅವರು, ಮೋದಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡಿ ನಿಮಗೆ ನೀಡಿರುವ ಮೀಸಲಾತಿ ರದ್ದು ಮಾಡುವ ಹುನ್ನಾರ ಅಡಗಿದೆ. ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರ ಪತ್ರಿ ಕೆಜಿಗೆ 34 ರೂ.ನೀಡುತ್ತೇವೆ ಎಂದು ಕೇಂದ್ರಕ್ಕೆ ಕೇಳಿದರೂ ಅಕ್ಕಿ ನೀಡದೆ ಭಾರತ್ ರೈಸ್ ಎಂದು 29 ರೂ.ಗೆ ಅಕ್ಕಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿ ಬಡ ಕುಟುಂಬ ವರ್ಷಕ್ಕೆ 1ಲಕ್ಷ ರೂ.ನೀಡುವ ಮಹಾಲಕ್ಷ್ಮೀ ಯೋಜನೆ, ರೈತರ ಸಾಲಮನ್ನಾ ಸೇರಿದಂತೆ 25 ಯೋಜನೆಗಳನ್ನು ಜಾರಿಗೊಳಿಸಲಿದೆ. ಲೋಕಸಭೆಯಲ್ಲಿ ನಮ್ಮಗಳ ಪರ ಧ್ವನಿಯಾಗಲು ಎಂ.ಲಕ್ಷ್ಮಣ್ ಉತ್ತಮ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ತಾಪಂ ಮಾಜಿ ಸದಸ್ಯ ಪ್ರಸನ್ನಕುಮಾರ್, ರಾಮಚಂದ್ರ ನಾಯಕ, ಚಂದ್ರಶೇಖರ್, ಶಾಂತಾ ರಮೇಶ್, ಚಿಕ್ಕಸ್ವಾಮಿ, ನಟರಾಜ್, ಲೋಕೇಶ್, ಚೌಡನಾಯಕ, ಬಿಳಿಕೆರೆ ಬಸವರಾಜ್, ಕುಮಾರ್, ರೈತ ಸಂಘದ ಅಯ್ಯಣ್ಣಗೌಡ, ರಮೇಶ್, ಕಾರ್ಯಕರ್ತರು ಭಾಗವಹಿಸಿದ್ದರು.