

ಹುಬ್ಬಳ್ಳಿ: ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಯಿಂದ ಮತಾಂಧ ಶಕ್ತಿಗಳಿಗೆ ರಕ್ಷಣೆ ಇದೆ ಎನ್ನುವ ಮನೋಭಾವನೆ ಇದೆ. ಶಿವಮೊಗ್ಗ, ಕೋಲಾರ ಗಲಾಟೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಹಾಗಾಗಿ, ಹಿಂದುಗಳ ಮೇಲೆ ಹಲ್ಲೆಯಂಥ ಪ್ರಕರಣಗಳು ಹೆಚ್ಚುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಯಾದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಪ್ರಮಾಣದಲ್ಲಿ ಗಲಾಟೆಯಾದರೂ ಉಡಾಫೆ ಉತ್ತರ ವ್ಯಕ್ತವಾಗುತ್ತಿದೆ. ಹಳೇ ಹುಬ್ಬಳ್ಳಿ ವಿಚಾರದಲ್ಲೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಿದ್ದರೆ, ಪೊಲೀಸರು ಮತ್ತು ಬಹಳಷ್ಟು ಜನರ ಹತ್ಯೆಯಾಗುತ್ತಿತ್ತು. ಹಳೇ ಹುಬ್ಬಳ್ಳಿಯಲ್ಲೂ ಸಾಕಷ್ಟು ಗಲಭೆ, ದೊಂಬಿ ನಡೆದಿದೆ. ಆದರೆ, ಇಂಥ ಗಲಭೆ ಪ್ರಕರಣ ಹಿಂಪಡೆಯಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ಗೆ ಕೇವಲ ಅಲ್ಪಸಂಖ್ಯಾತರು ಮತ ಹಾಕಿಲ್ಲ ಅನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ದೇಶದ್ರೋಹಿಗಳು, ಗಲಭೆಕೋರರ ಪರ ನಿಲ್ಲುವುದನ್ನು ನಾವು ಖಂಡಿಸುತ್ತೇವೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೊಷಣೆ ಕೂಗುವವರು, ತಲ್ವಾರ್ ಹಿಡಿದು ಜೀವ ಬೆದರಿಕೆ ಹಾಕುವವರನ್ನು ರಕ್ಷಣೆ ಮಾಡಲು ಸರ್ಕಾರ ಹೊರಟಿದೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ಗೆ ಬೆಂಬಲ ಸೂಚಿಸುವುದು ಕಾಂಗ್ರೆಸ್ ನಿಯಮ. ಪಾಕಿಸ್ತಾನಿ ಭಯೋತ್ಪಾದಕರ ಪರ ನಿಲ್ಲಲು ಜನರು ನಿಮಗೆ ಅಧಿಕಾರ ಕೊಟ್ಟಿಲ್ಲ. ಕಾಂಗ್ರೆಸ್ನವರು ಎಚ್ಚರಿಕೆಯಿಂದ ಇರಬೇಕು ಎಂದರು.
ಧಾರವಾಡ ಜಿಲ್ಲೆಗೆ ಉಗ್ರರ ನಂಟಿರುವುದನ್ನು ದೆಹಲಿ ಪೊಲೀಸರು ಹೇಳಿದ್ದಾರೆ. ಗೃಹ ಇಲಾಖೆ ದೆಹಲಿ ಪೊಲೀಸರ ಜತೆಗೆ ಸಂಪರ್ಕ ಸಾಧಿಸುವ ಮೂಲಕ ಸೂಕ್ತ ತನಿಖೆ ನಡೆಸಬೇಕು. ದೇಶದ್ರೋಹಿ ಕೆಲಸ ಮಾಡುವವರ ವಿರುದ್ಧದ ಪ್ರಕರಣ ಹಿಂಪಡೆದರ ಈ ರೀತಿ ಉಗ್ರರ ತಾಣವಾಗುವುದು ಸಹಜ ಎಂದರು.
ತಮ್ಮದೇ ಪಕ್ಷ ಶಿವಶಂಕರಪ್ಪ ಶಾಮನೂರ ಅವರು ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾತಿ-ಜಾತಿಗಳ ನಡುವೆ ಒಡೆದಾಳುತ್ತಿದೆ ಎಂದು ಮೂದಲಿಸಿದರು.