

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಜಾನನ ಮಹಾಲೆ ಪ್ರಸಾದನ ಕ್ಷೇತ್ರದ ನಕ್ಷತ್ರ. ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯನ್ನು ಗಜಾನನ ಮಹಾಲೆ ಅವರಲ್ಲಿ ಕಾಣಬಹುದು ಎಂದು ಮೈಸೂರಿನ ಹಿರಿಯ ರಂಗನಟ ಹುಲಗಪ್ಪ ಕಟ್ಟಿಮನಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಗಜಾನನ ಮಹಾಲೆ ದತ್ತಿ ನಿಮಿತ್ತ ಸೋಮವಾರ ಆಯೋಜಿಸಿದ್ದ ಉಪನ್ಯಾಸ, ಸಂಗೀತ ಹಾಗೂ ಭರತ ನಾಟ್ಯ ಕಾರ್ಯಕ್ರಮದಲ್ಲಿ ರಂಗಭೂಮಿ ಮತ್ತು ಪ್ರಸಾದನ ಕುರಿತು ಅವರು ಉಪನ್ಯಾಸ ನೀಡಿದರು.
ದಿ. ಗಜಾನನ ಮಹಾಲೆ ಅವರದ್ದು ಪರಿಪೂರ್ಣ ಬದುಕು, ಸಾರ್ಥಕ ಬದುಕು. ಪ್ರಸಾದನ ಮಾತ್ರವಲ್ಲ ಒಳ್ಳೆ ರಂಗಕಲಾವಿದ, ಹಾಮೋರ್ನಿಯಂ ವಾದಕ, ಉತ್ತಮ ಗಾಯಕರೂ ಆಗಿದ್ದರು. ಪ್ರಸಾದನ ಕಲೆ ಅವರಿಗೆ ದೈವದತ್ತವಾಗಿ ಬಂದ ಕಲೆಯಾಗಿದೆ. ಏನೆಲ್ಲಾ ಸಾಧನೆ ಮಾಡಿದರೂ ತಮ್ಮ ಮನೆತನದ ಕ್ಷೌರಿಕ ವೃತ್ತಿ ಬಿಟ್ಟು ಕೊಟ್ಟಿರಲಿಲ್ಲ. ಸಹಸ್ರಾರು ರಂಗ ಕಲಾವಿದರ ಪಾತ್ರಗಳಿಗೆ ಜೀವಕಳೆ ತುಂಬಿದವರು. ಸರಳವಾಗಿ ಬದುಕಿದ ಅವರು ಎಲ್ಲರಿಗಾಗಿ ಬದುಕಿದ್ದು ಜೀವನ ಸಾರ್ಥಕತೆಯ ಸಂಕೇತ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ಕೆ.ಎಚ್. ನಾಯಕ ಮಾತನಾಡಿದರು. ಸಂತೋಷ ಮಹಾಲೆ, ವಾಣಿಶ್ರೀ ಭಟ್, ಡಾ. ಶಶಿಧರ ನರೇಂದ್ರ, ಎಂ.ಎಸ್. ನರೇಗಲ್, ರವಿ ಕುಲಕರ್ಣಿ, ವಿಜಯೇಂದ್ರ ಅರ್ಚಕ, ದೇಸಾಯಿಗೌಡ ಪಾಟೀಲ, ಇತರರು ಇದ್ದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಸಂತೋಷ ಮಹಾಲೆ ವಂದಿಸಿದರು.