ಕ್ರೀಡಾಂಗಣ ಸಮಸ್ಯೆಯಿಂದ ಸೊರಗುತ್ತಿದೆ ಕ್ರೀಡಾಕ್ಷೇತ್ರ

29ss3patasanchalana
Published on


ಶನಿವಾರಸಂತೆ : ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು ದೈಹಿಕ ಶಿಕ್ಷಣ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ ಎಂದು ಶನಿವಾರಸಂತೆ ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಆಹಮ್ಮದ್ ಅಭಿಪ್ರಾಯಪಟ್ಟರು.

ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಹಿರಿಯ ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಗಾಗಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ ಹಂತದಲ್ಲಿ ಕ್ರೀಡಾಪಟುಗಳನ್ನು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ತಯಾರುಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಆದರೆ ಇಂದು ಶಾಲೆಗಳಲ್ಲಿ ಸೂಕ್ತವಾದ ಆಟದ ಮೈದಾನ ಇಲ್ಲದಿರುವುದು ಕ್ರೀಡಾ ಸೌಲಭ್ಯಗಳ ಕೊರತೆಯಿಂದ ಕ್ರೀಡಾ ಪ್ರತಿಭೆಗಳನ್ನು ತಯಾರು ಮಾಡಲು ಸಮಸ್ಯೆಯಾಗುತ್ತಿದೆ. ಈ ಕಾರಣದಿಂದ ಕ್ರೀಡಾ ಪ್ರತಿಭೆಗಳು ಮತ್ತು ಕ್ರೀಡಾ ಕ್ಷೇತ್ರವು ಸೊರಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ ಸೇವಕ ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲವುವನ್ನು ಸಮಾನ ಮನೋಭಾವನೆಯಿಂದ ಸ್ವೀಕರಿಸಿ ಹೊಸ ಹುರುಪಿನಿಂದ ಸ್ಫರ್ಧೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಶನಿವಾರಸಂತೆ ಗ್ರಾ.ಪಂ.ಸದಸ್ಯ ಎಸ್.ಎನ್.ರಘು ಮಾತನಾಡಿ, ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳನ್ನು ಸ್ಪೂರ್ತಿಯನ್ನಾಗಿ ತೆಗೆದುಕೊಳ್ಳಬೇಕು. ಇದರಿಂದ ಮುಂದೆ ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಬಹುದು. ಆದರೆ ನಮ್ಮ ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದರೂ ವಿಶ್ವ ಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾವು ಕ್ರೀಡೆಗೆ ಪ್ರೋತ್ಸಾಹ ಕೊಡುವುದರಲ್ಲಿ ಎಡವಿದ್ದೇವೆ ಎಂದು ವಿಷಾಧಿಸಿದರು.

ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯನ್ನು ಕ್ರೀಡಾ ಮನೋಭಾವನೆಯಿಂದ ಹಾಗೂ ಕ್ರೀಡಾ ತೀರ್ಪುಗಾರರು ಕ್ರೀಡೆಯನ್ನು ಒಂದು ಸ್ಪರ್ಧೆಯನ್ನಾಗಿ ತೆಗೆದುಕೊಳ್ಳುವ ಮೂಲಕ ಕ್ರೀಡಾಕೂಟವನ್ನು ಯಶಸ್ಸುಗೊಳಿಸಬೇಕು ಎಂದರು.

ದುಂಡಳ್ಳಿ ಗ್ರಾ.ಪಂ.ಸದಸ್ಯೆ ಪೂರ್ಣಿಮಾ ಕಿರಣ್, ಕಾರ್ಯಕ್ರಮದಲ್ಲಿ ಸುಪ್ರಜ ಗುರುಕುಲ ಶಾಲಾ ಪ್ರಾಂಶುಪಾಲರಾದ ಡಿ.ಸುಜಲಾದೇವಿ, ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್, ತ್ಯಾಗರಾಜ ಕಾಲನಿ ಶಾಲಾ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಪತ್ರಕರ್ತ ಎಚ್.ಆರ್.ಹರೀಶ್‌ಕುಮಾರ್, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಕವಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net