ಹಬ್ಬಿದ ಮಂಗನಬಾವು ‘ಮಕ್ಕಳು ತಬ್ಬಿಬ್ಬು’

21 MND 1
Published on

ಮುಂಡಗೋಡ: ಪಟ್ಟಣದ ಇಂದಿರಾಗಾಂಧಿ ವಸತಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗನಬಾವು ಕಾಯಿಲೆ ಹಬ್ಬಿದ್ದು ಮಕ್ಕಳು ತಬ್ಬಿಬ್ಬಾಗಿದ್ದಾರೆ.

ವಿಷಯ ಅರಿತ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಭರತ ಗುರುವಾರ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿದರು.

6-10ನೇ ತರಗತಿಯವರೆಗೆ 200 ಮಕ್ಕಳಿರುವ ಶಾಲೆಯಲ್ಲಿ, ಕಳೆದ ಮೂರು ದಿನಗಳ ಹಿಂದೆ ಹತ್ತು ಮಕ್ಕಳಲ್ಲಿ ಮಂಗನಬಾವು ಕಾಣಿಸಿಕೊಂಡಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿತ್ತು. ಆದರೆ, ಪ್ರತಿ ದಿನವೂ ಮಕ್ಕಳಲ್ಲಿ ರೋಗ ಹೆಚ್ಚಾಗುತ್ತಿದೆ. ಗುರುವಾರ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗನ ಬಾವು ಕಾಣಿಸಿಕೊಂಡಿದೆ. ಇದರಿಂದ ಶಾಲೆಯ ಎಲ್ಲ ವಿದ್ಯಾರ್ಥಿಗಳು ಆತಂಕಗೊಂಡಿದ್ದು, ಜ್ವರ, ನೆಗಡಿಯಿಂದ ಬಳಲುತ್ತಿದ್ದಾರೆ.

ವಿದ್ಯಾರ್ಥಿಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಒಂದೇ ಕೊಠಡಿಯಲ್ಲಿ ಹಾಸಿಗೆ ಹೊದ್ದುಕೊಂಡು ಮಲಗಿದ್ದಾರೆ. ಮಕ್ಕಳಿಗೆ ಜ್ವರ ಬಂದಿರುವುದರಿಂದ ಕೊಠಡಿಯಿಂದ ಹೊರ ಹೋಗುತ್ತಿಲ್ಲ. ಸೂಕ್ತ ಚಿಕಿತ್ಸೆಯ ಜತೆಗೆ ಆರೈಕೆ ಮಾಡುವುದು ಅಗತ್ಯವಾಗಿದೆ ಎಂದು ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಷಯ ತಿಳಿದು ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಟಿ.ವೈ. ದಾಸನಕೊಪ್ಪ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಕಾಯಿಲೆ ಕಾಣಿಸಿಕೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸುವಂತೆ ಸೂಚಿಸಿದ್ದಾರೆ

ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಮಂಗನ ಬಾವು ಕಾಣಿಸಿಕೊಂಡಿದೆ. ಅವರನ್ನು ತಪಾಸಣೆ ಮಾಡಿದ ನಂತರ ವೈದ್ಯರ ಸೂಚನೆ ಮೇರೆಗೆ ಪಾಲಕರ ಜತೆ ಕಳಿಸಿಕೊಡಲಾಗುವುದು. ಗುಣಮುಖರಾದ ನಂತರ ಮರಳಿ ಶಾಲೆಗೆ ಬರಲು ತಿಳಿಸಲಾಗಿದೆ. | ಟಿ.ವೈ. ದಾಸನಕೊಪ್ಪ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮುಂಡಗೋಡ ಮಂಗನಬಾವು ಒಬ್ಬರಿಂದ ಒಬ್ಬರಿಗೆ ಹರಡುವಂತ ಕಾಯಿಲೆಯಾಗಿದ್ದು, ಜ್ವರ, ನೆಗಡಿ, ಗಂಟಲು ನೋವು ಇದರ ಲಕ್ಷಣಗಳಾಗಿವೆ. ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ, ಸೂಕ್ತ ಚಿಕಿತ್ಸೆ ಪಡೆದು ಐಸೋಲೇಟ್ ಆದರೆ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು. ವಿದ್ಯಾರ್ಥಿಗಳ ರಕ್ತದ ಸ್ಯಾಂಪಲ್ ತೆಗೆದು ಪ್ರಯೋಗಾಲಯಕ್ಕೆ ಕಳಿಸಲಾಗುವುದು. | ಡಾ. ಭರತ ಡಿ.ಟಿ., ತಾಲೂಕು ಆಸ್ಪತ್ರೆಯ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net