ಮುದ್ದೇಬಿಹಾಳದಲ್ಲಿ ಎಳ್ಳ ಅಮಾವಾಸ್ಯೆ ವೈಭವ

The splendor of the new moon in Muddebihal
ಮುದ್ದೇಬಿಹಾಳದ ಶ್ರೀಶೈಲ ಪೂಜಾರಿ ಅವರ ಹೊಲದಲ್ಲಿ ಚರಗ ಚೆಲ್ಲಿದ ನಂತರ ಹೆಣ್ಣುಮಕ್ಕಳು ಭೂರಿ ಭೋಜನ ಸವಿದರು. ವಿಜಯಲಕ್ಷ್ಮೀ ಪೂಜಾರಿ, ಕವಿತಾ ಪೂಜಾರಿ, ಶಾರದಾ ಪೂಜಾರಿ, ಮಹಾದೇವಿ ವಾಲಿಕಾರ, ರೇಖಾ ಬಿರಾದಾರ, ಶ್ವೇತಾ ಕೋಲಾರ ಇನ್ನಿತರರು ಇದ್ದರು.
Published on

ಮುದ್ದೇಬಿಹಾಳ: ತಾಲೂಕಿನಾದ್ಯಂತ ಸೋಮವಾರ ಎಳ್ಳ್ಳ ಅಮಾವಾಸ್ಯೆಯನ್ನು ರೈತರು ರೈತರಲ್ಲದವರನ್ನು ಜೊತೆಗೂಡಿಸಿಕೊಂಡು ಭೂತಾಯಿ ಮತ್ತು ಬೆಳೆಯ ಪೂಜೆ ನೆರವೇರಿಸಿ, ನೈವೇದ್ಯ ಅರ್ಪಿಸಿ, ಹುಲ್ಲಂಬರಿಗೋ, ಚಳ್ಳಂಬರಿಗೋ ಎಂದು ಹೊಲದ ತುಂಬೆಲ್ಲ ತಿರುಗಾಡಿ ಚರಗ ಚಲ್ಲುವ ಮೂಲಕ ಸಡಗರದಿಂದ ಆಚರಿಸಿದರು.

ವಿವಿಧ ತರಹದ ತರಕಾರಿ, ಕಾಳು ಪಲ್ಯೆ, ಹೂರಣ ಮತ್ತು ಶೇಂಗಾದ ಹೋಳಿಗೆ, ಅನ್ನ, ಸಾಂಬಾರ್, ಪಲಾವ್, ಉಪ್ಪಿನಕಾಯಿ, ತರಹೇವಾರಿ ಚಟ್ನಿ, ಮೊಸರು, ಮಜ್ಜಿಗೆ ಹೀಗೆ ಬಾಯಲ್ಲಿ ನೀರು ಬರಿಸುವ ಉತ್ತರ ಕರ್ನಾಟಕದ ಅಪ್ಪಟ ಜವಾರಿ ಅಡುಗೆ ತಯಾರಿಸಿ ಅಕ್ಕಪಕ್ಕದವರನ್ನು, ಸ್ನೇಹಿತರನ್ನು ತಮ್ಮ ಹೊಲಕ್ಕೆ ಕರೆದೊಯ್ದು ಅವರಿಗೆ ಉಣಬಡಿಸುವ ಮೂಲಕ ಸಂಭ್ರಮ ಹಂಚಿಕೊಂಡರು.

ಇತ್ತೀಚಿನ ದಿನಗಳಲ್ಲಿ ಎತ್ತಿನ ಬಂಡಿ ಬಳಕೆ ಕಡಿಮೆಯಾಗಿದ್ದರಿಂದ ಅನೇಕರು ಆಟೋ, ಟಂಟಂ, ಕಾರು, ಜೀಪು, ಬೈಕ್, ಬೈಸಿಕಲ್ ಮೂಲಕ ಹೊಲಗಳಿಗೆ ತೆರಳಿದ್ದರು. ಊರಿನ ಪಕ್ಕದಲ್ಲೇ ಹೊಲ ಇರುವವರು ಕಾಲ್ನಡಿಗೆಯಲ್ಲೇ ತಲೆ ಮೇಲೆ ನೀರಿನ ಕೊಡ, ಬುತ್ತಿ ಬಾನ ಹೊತ್ತು ನಡೆದದ್ದು ಹಲವೆಡೆ ಕಂಡು ಬಂದಿತು.

ಹೊಲದಲ್ಲಿ ಈ ಬಾರಿ ಜೋಳದ ಬೆಳೆ ಪ್ರಮಾಣ ಕಡಿಮೆ ಇದೆ. ಬಹಳಷ್ಟು ರೈತರು ತೊಗರಿ ಬೆಳೆದಿದ್ದಾರೆ. ನೀರಾವರಿ ಇರುವವರು ಕಬ್ಬು, ಮೆಣಸಿನಕಾಯಿ ಬೆಳೆದಿದ್ದಾರೆ. ಜೋಳ ಬೆಳೆದವರು ಕಡಲೆಯನ್ನು ಮಿಶ್ರ ಬೆಳೆಯನ್ನಾಗಿ ಬಿತ್ತಿದರೆ ಕೆಲವರು ಕಡಲೆಯನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆದಿದ್ದಾರೆ. ಚರಗ ಚೆಲ್ಲಿದ ನಂತರ ಕಡಲೆ (ಸುಲಗಾಯಿ) ತಿಂದು ಬಾಯಿ ಚಪ್ಪರಿಸಿದ್ದು ವಿಶೇಷವಾಗಿತ್ತುಪಟ್ಟಣದ ಹೊರವಲಯದಲ್ಲಿರುವ ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕ ಶ್ರೀಶೈಲ ಪೂಜಾರಿ ಅವರು ತಮ್ಮ ಹೊಲಕ್ಕೆ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಮುಖಂಡರಾದ ಸಂಗನಗೌಡ ಪಾಟೀಲ, ಸದಾಶಿವ ಮಠ, ಅಶೋಕ ಚಟ್ಟೇರ, ಟಿ ವಿಜಯಭಾಸ್ಕರ, ಹುಸೇನ್ ಮುಲ್ಲಾ, ಉಮರ್ ಜಾನ್ವೇಕರ್, ಸಂಗಮೇಶ ಪಾಟೀಲ, ಸಂಗಪ್ಪ ಮೇಲಿನಮನಿ, ಮುತ್ತು ರಾಯಗೊಂಡ, ಸಾಗರ ಉಕ್ಕಲಿ, ಯಾಸಿನ್ ಬಾಗವಾನ, ಬಸವರಾಜ ವಾಲಿಕಾರ, ರೇವಣೆಪ್ಪ ನಡಗೇರಿ, ಸೋಮು ಸಜ್ಜನ್, ರವಿ ಪಾಟೀಲ, ರವಿ ಅಮಣ್ಣವರ, ಸಿದ್ದು ಕಟ್ಟಿ ಸೇರಿ ಹಲವರನ್ನು ಆಹ್ವಾನಿಸಿದ್ದರೆ, ಶ್ರೀಶೈಲ ಅವರ ಪತ್ನಿ ವಿಜಯಲಕ್ಷ್ಮಿ ಪೂಜಾರಿ ಅವರು ಕವಿತಾ ಪೂಜಾರಿ, ಶಾರದಾ ಪೂಜಾರಿ, ಮಹಾದೇವಿ ವಾಲಿಕಾರ, ಸರಸ್ವತಿ ಪೂಜಾರಿ, ರೇಖಾ ಬಿರಾದಾರ, ಸರಸ್ವತಿ ಪೂಜಾರಿ, ಶ್ವೇತಾ ಕೋಲಾರ ಸೇರಿ ಅಕ್ಕಪಕ್ಕದವರನ್ನು ಆಹ್ವಾನಿಸಿ ಹೊಲಕ್ಕೆ ಕರೆದೊಯ್ದು ಕೃಷಿಕರ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ಇದು ಅಪ್ಪಟ ಭಾರತೀಯ ಸಂಪ್ರದಾಯದ ಹಬ್ಬ. ನಮಗೆ ಅನ್ನ ಕೊಡುವ ಭೂತಾಯಿಯನ್ನು, ಬೆಳೆಯನ್ನು ಪೂಜಿಸಿ ನೈವೇದ್ಯ ಕೊಡುವ ಪದ್ಧತಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. -ಸಂಗನಗೌಡ ಪಾಟೀಲ, ಮುಖಂಡರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net