ದೊಡ್ಡಬಳ್ಳಾಪುರದ ಮುತ್ಯಾಲಮ್ಮದೇವಿ ಜಾತ್ರೆ ವೈಭವ

07 05 2025_BGR RURAL_PAGE_02
Published on

ದೊಡ್ಡಬಳ್ಳಾಪುರ : ಇಲ್ಲಿನ ಶಾಂತಿನಗರದ ಶ್ರೀ ಮುತ್ಯಾಲಮ್ಮದೇವಿ ರಥೋತ್ಸವ ಮಂಗಳವಾರ ಜನಪದ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಆರತಿ ಉತ್ಸವದಲ್ಲಿ ದೊಡ್ಡಬಳ್ಳಾಪುರದ ಶಾಂತಿನಗರ, ದರ್ಗಾಜೋಗಿಹಳ್ಳಿ, ನಾಗಸಂದ್ರ, ಕೊಡಿಗೇಹಳ್ಳಿ, ಕುರುಬರಹಳ್ಳಿ ಮತ್ತು ರೋಜಿಪುರ ಗ್ರಾಮಗಳಿಂದ ನೂರಾರು ಮಹಿಳೆಯರು ಹೊಂಬಾಳೆ ಹಾಗೂ ತಂಬಿಟ್ಟಿನ ಆರತಿಗಳನ್ನು ಮೆರವಣಿಗೆಯಲ್ಲಿ ತಂದು ದೇವಿಗೆ ಅರ್ಪಿಸಿದರು.

ಸಹಸ್ರಾರು ಜನ ಭಾಗಿ: ಶ್ರೀ ಮುತ್ಯಾಲಮ್ಮ ಸೇವಾ ದತ್ತಿ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಜಾತ್ರಾ ಮಹೋತ್ಸವ ಮಂಗಳವಾರ ಬೆಳಗ್ಗೆ 10.30ಕ್ಕೆ ಆರಂಭವಾಯಿತು. ಶಾಂತಿನಗರದ ಮುಖ್ಯರಸ್ತೆ ಮೂಲಕ ಮುಗುವಾಳಪ್ಪ ವೃತ್ತದವರೆಗೆ ಸಂಚರಿಸಿ ಬಳಿಕ ದೇವಾಲಯಕ್ಕೆ ಹಿಂದಿರುಗಿತು. ವಿವಿಧೆಡೆ ಅರವಂಟಿಕೆಗಳು ಆಯೋಜನೆಗೊಂಡಿದ್ದವು. ಸಾವಿರಾರು ಭಕ್ತರು ದೇವಿ ಹಾಗೂ ದೊಡ್ಡಮ್ಮ ದೇವಿಗೆ ಪೂಜೆ ಸಲ್ಲಿಸಿ, ಆರತಿ ಅರ್ಪಿಸಿದರು.

ಹಗಲು ಪರಿಷೆ : ಜಾತ್ರೆಯ ಪ್ರಯುಕ್ತ ಬುಧವಾರ ಹಗಲು ಪರಿಷೆ ನಡೆಯಲಿದೆ. ಜಾತ್ರೆಯಲ್ಲಿ ಹತ್ತಾರು ಅಂಗಡಿ ಮಳಿಗೆಗಳು ತಲೆಯೆತ್ತಿದ್ದು, ಆಟಿಕೆಗಳು, ತರಹೆವಾರಿ ಕ್ರೀಡಾ ಚಟುವಟಿಕೆಗಳು ಗಮನ ಸೆಳೆಯುತ್ತಿವೆ. ದೇವಾಲಯದಲ್ಲಿ ವಿವಿಧ ದೇವರ ಪ್ರತಿಕೃತಿಗಳನ್ನು ಪ್ರದರ್ಶಿಸಲಾಗಿದ್ದು, ಆಕರ್ಷಣೀಯವಾಗಿವೆ.

ಸಾಂಸತಿಕ ಕಾರ್ಯಕ್ರಮ : ಶ್ರೀ ಮುತ್ಯಾಲಮ್ಮ ಸಾಂಸತಿಕ ಸೇವಾ ಸಮಿತಿಯಿಂದ ವಿವಿಧ ಸಾಂಸತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದಲ್ಲಿ ಡೊಳ್ಳುಕುಣಿತ, ಶಿವತಾಂಡವ, ವೀರಗಾಸೆ, ಭದ್ರಕಾಳಿ, ಗಾರುಡಿ ಗೊಂಬೆಗಳು, ಮರಗಾಲು ಮನುಷ್ಯ, ವೀರಭದ್ರನ ಕುಣಿತ, ಪೂಜಾ ಕುಣಿತ, ತಮಟೆ, ಡ್ರಮ್ಸ್​ ಸೇರಿ ಹಲವು ತಂಡಗಳು ಪಾಲ್ಗೊಂಡಿದ್ದವು. ರಥೋತ್ಸವ ಮತ್ತು ಜಾತ್ರೆ ಪ್ರಯುಕ್ತ ದೇವಸ್ಥಾನವನ್ನು ವಿಶೇಷ ಅಲಂಕಾರ ಮಾಡಲಾಗಿತ್ತು.

ಗಮನ ಸೆಳೆದ ಲಕ್ಷ್ಮೀ ಅಲಂಕಾರ : ಈ ಬಾರಿ ನಗರದೇವತೆ ಮುತ್ಯಾಲಮ್ಮ ದೇವಿ ಮೂಲ ವಿಗ್ರಹಕ್ಕೆ ಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ವಿಶೇಷವಾಗಿ ರೂಪಿಸಲಾಗಿದ್ದ ಈ ಅಲಂಕಾರ ಭಕ್ತರನ್ನು ಆಕರ್ಷಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net