ದಸರಾ ಮಹೋತ್ಸವದಲ್ಲಿ ಮೇಳೈಸಿದ ಸಿರಿವೈಭವ

mysore
Published on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಸಿರಿವೈಭವ ಮೇಳೈಸಿದ್ದು, 2ನೇ ದಿನವಾದ ಶುಕ್ರವಾರ ‘ದಸರಾ ದರ್ಬಾರ್’ನ ಪರಿಮಳ ‘ಮಲ್ಲಿಗೆ ನಗರಿ’ಯಲ್ಲಿ ಎಲ್ಲೆಡೆ ಪಸರಿಸಿತು.


ಅರಮನೆ ಅಂಗಳದಲ್ಲಿ ಬೆಳಗ್ಗೆ ರಂಗೋಲಿ ಚಿತ್ತಾರ ಮೂಡಿತು. ರಂಗೋಲಿ ಸ್ಪರ್ಧೆಯಲ್ಲಿ ಅಂದಾಜು 100 ಮಹಿಳೆಯರು ಭಾಗವಹಿಸಿ ವೈವಿಧ್ಯಮಯ ರಂಗೋಲಿಯಿಂದ ನೆಲದ ಮೇಲೇಯೇ ವರ್ಣಮಯಯ ಕಾಮನಬಿಲ್ಲು ಮೂಡಿಸಿದರು.


ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿ ಧೂಳೆಬ್ಬಿಸಿತು. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದ್ದ ಈ ಸವಾರಿ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಪಾರಂಪರಿಕತೆಯ ಮಹತ್ವ ಸಾರಿತು.


ಮಕ್ಕಳ ದಸರಾ ಕಲಾಥಾನ್ ಕಣ್ಮನ ಸೆಳೆಯಿತು. ಗೊರವರ ಕುಣಿತ, ಕರಗ, ಗಾರುಡಿ ಗೊಂಬೆ, ವೀರಗಾಸೆ ನೋಡುಗರ ಮನಸೂರೆಗೊಳಿಸಿತು. ಮೈಸೂರು ಅರಸರು, ಬಸವಣ್ಣ, ಅಕ್ಕ ಮಹಾದೇವಿ, ನವದುರ್ಗೆಯರು ಸೇರಿದಂತೆ ವಿವಿಧ ವೇಷ ಧರಿಸಿದ್ದ ವಿದ್ಯಾರ್ಥಿಗಳು ಬಿರುಬಿಸಿಲಿನಲ್ಲೂ ಹೆಜ್ಜೆಹಾಕಿ ಉತ್ಸವದ ಕಳೆ ಹೆಚ್ಚಿಸಿದರು.


ನಗರದ ಜೆ.ಕೆ. ಮೈದಾನದಲ್ಲಿ ಮಹಿಳಾ ದಸರಾಕ್ಕೆ ಚಾಲನೆ ದೊರೆಯಿತು. ಇಲ್ಲಿಯ ವಸ್ತು ಪ್ರದರ್ಶನ ಗಮನ ಸೆಳೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್.ಸಿ.ಮಹದೇವಪ್ಪ ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಳಿಗೆಗಳನ್ನು ವೀಕ್ಷಿಸಿದರು. ಅಂದಾಜು 30 ರಿಂದ 40 ಮಳಿಗೆಗಳಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿರುವ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿರುವ ಕರಕುಶಲ ವಸ್ತುಗಳು ಇಲ್ಲಿವೆ.


ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ದಸರಾ ಕುಸ್ತಿ ಪಂದ್ಯಗಳು ಬಹಳ ತುರುಸಿನಿಂದ ಕೂಡಿದ್ದವು. ಈ ಮೂಲಕ ನೆರೆದ ಕುಸ್ತಿ ಪ್ರೇಮಿಗಳನ್ನು ಚಿತ್‌ಗೊಳಿಸಿ ಮನಗೆದ್ದಿತು. ಜತೆಗೆ, ವಿವಿಧ ಕ್ರೀಡಾ ಚಟುವಟಿಕೆಗಳು ಕೂಡ ರೋಚಕ ಅನುಭವ ನೀಡಿದವು.


ಕುಪ್ಪಣ್ಣ ಉದ್ಯಾನದಲ್ಲಿ ನಡೆದಿರುವ ದಸರಾ ಫಲಪುಷ್ಪ ಪ್ರದರ್ಶನ ಹೂವಿನ ಪ್ರೇಮಿಗಳನ್ನು ಕೈಬಿಸಿ ಕರೆಯಿತು. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿರುವ ಆಹಾರ ಮೇಳದಲ್ಲಿ ವೈವಿಧ್ಯಮಯ ಖಾದ್ಯ ಘಮಲು ಬಾಯಿಯಲ್ಲಿ ನೀರು ತರಿಸಿತು. ಆಹಾರಪ್ರಿಯಯರು ಇಲ್ಲಿಗೆ ಲಗ್ಗೆ ಇಟ್ಟು ತಮ್ಮ ನೆಚ್ಚಿನ ಆಹಾರವನ್ನು ಸವಿದು ಖುಷಿಪಟ್ಟರು.


ಆಹಾರ ಮೇಳ ಮತ್ತು ಫಲಪುಷ್ಪ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ದಸರೆಯ ಲವಲವಿಕೆಯನ್ನು ವೃದ್ಧಿಸಿದೆ. ಸೂರ್ಯಾಸ್ತವಾಗುತ್ತಿದ್ದಂತೆ ವಿವಿಧೆಡೆ ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು. ಶಾಸ್ತ್ರೀಯ ನೃತ್ಯ, ಸಂಗೀತ, ನೃತ್ಯರೂಪಕ ಸಂಗೀತದ ಸುಧೆ ಹರಿಯಿತು. ನಗರದ ವಿವಿಧೆಡೆ ಮಾಡಿರುವ ದೀಪಾಲಂಕಾರವು ಮಲ್ಲಿಗೆ ನಗರಿಯ ಅಂದವನ್ನು ಹೆಚ್ಚಿಸಿತು.


ಪ್ರಜ್ವಲಿಸುವ ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಲೆಗಳೂ ಕಳೆಗಟ್ಟಿತ್ತು. ನರಸಿಂಹಲು ವಡವಾಟಿ ಮತ್ತು ಕದ್ರಿ ರಮೇಶ್ ನಾಥ್ ನಡುವಿನ ಕ್ಲಾರಿಯೋನೆಟ್ ಸ್ಯಾಕ್ಸೋಫೋನ್ ಜುಗಲ್‌ಬಂದಿ ಸಂಗೀತಾಸಕ್ತರ ಮನಸೊರೆಗೊಳಿಸಿತು. ಎಚ್.ಜನಾರ್ದನ್(ಜನ್ನಿ) ಮತ್ತು ತಂಡದಿಂದ ಜಾನದಪ ಗೀತ ಗಾಯನದ ಸಂಭ್ರಮ ಮೇಳೈಸಿತು. ಇದರೊಂದಿಗೆ ತತ್ವಪದ ಗಾಯನ, ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ, ನವದುರ್ಗಾ ವೈಭವ ನೃತ್ಯರೂಪಕ, ಕಥಕ್ ನೃತ್ಯ ಸಭಿಕರನ್ನು ರಂಜಿಸಿತು.


ಬಹುಪರದೆಯ 2 ಮಲ್ಟಿಪ್ಲೆಕ್ಸ್‌ನಲ್ಲಿ ಆಯೋಜಿಸಿರುವ ದಸರಾ ಚಲನಚಿತ್ರೋತ್ಸವದಲ್ಲಿ ಚಿತ್ರಗಳ ಪ್ರದರ್ಶನಕ್ಕೆ ನಿರ್ದೇಶಕಿ ಸುಮನಾ ಕಿತ್ತೂರು ಚಾಲನೆ ನೀಡಿದರು. ಬಳಿಕ ಪ್ರದರ್ಶನ ಕಂಡ ವಿವಿಧ ಬಗೆಯ ಸಿನಿಮಾಗಳು ಸಿನಿ ಅಭಿಮಾನಿಗಳನ್ನು ಮನರಂಜಿಸಿದವು.

ವಿಂಟೇಜ್ ಕಾರ್‌ಗಳು ಮತ್ತು ಕ್ಲಾಸಿಕ್ ಕಾರ್‌ಗಳ ಪ್ರದರ್ಶನ ದಸರೆಯ ಸೊಬಗು ಹೆಚ್ಚಿಸಿತು. ಒಂದೇ ಸೂರಿನಡಿ ಅದ್ಭುತವಾದ ಕಾರ್ ಸಂಗ್ರಹ ಪ್ರದರ್ಶನ ವಿಶೇಷ ಎನಿಸಿತು. ವಿವಿಧ ಬಣ್ಣದ, ಆಕೃತಿಯ ಕಾರ್, ಬೈಕ್‌ಗಳು ನೋಡುಗರ ಮನಸೂರೆಗೊಂಡವು.

80 ರಿಂದ 100 ವರ್ಷ ಹಳೆಯದಾದ ವಿವಿಧ ಮಾಡೆಲ್ ಕಾರ್‌ಗಳು, ಸ್ಕೂಟರ್‌ಗಳು ವಾಹನಲೋಕದ ಗತವೈಭವವನ್ನು ನೆನಪಿಸಿದವು

ಯುವ ದಸರಾ: 1 ಲಕ್ಷ ಜನ ವೀಕ್ಷಣೆಗೆ ಅವಕಾಶ


ನಗರದ ಹೊರವಲಯದ ಉತ್ತನಹಳ್ಳಿ ಮೈದಾನದಲ್ಲಿ ಅ.6ರಿಂದ 10ರವರೆಗೆ ಆಯೋಜಿಸಿರುವ ಯುವ ದಸರಾವನ್ನು 1 ಲಕ್ಷ ಜನರು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.


ಭದ್ರತೆ ಕುರಿತು ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ವಿಶೇಷವಾಗಿ ಮಹಿಳೆಯರ ಭದ್ರತೆಯ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net