ಬ್ರಹ್ಮಾಂಡ ವ್ಯಾಪಿಸಿದ ಆತ್ಮಚೈತನ್ಯ

New Siddharudha
Published on

ಹುಬ್ಬಳ್ಳಿ : ಪ್ರತಿಯೊಬ್ಬರಲ್ಲಿರುವ ಆತ್ಮಚೈತನ್ಯವು ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿದೆ ಎಂದು ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.

ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ಆಯೋಜಿಸಿರುವ ವಿಶ್ವ ವೇದಾಂತ ಪರಿಷತ್ ವಿದ್ವತ್ ಗೋಷ್ಠಿಯಲ್ಲಿ ಅವರು ಬುಧವಾರ ಮಾತನಾಡಿದರು.

ಈ ಆತ್ಮಚೈತನ್ಯವೇ ಆ ಪರಬ್ರಹ್ಮ. ಅದನ್ನು ಕಾಣುವ ಗುರಿಯನ್ನು ಎಲ್ಲರೂ ಹೊಂದಬೇಕು. ಆಗ ಬದುಕು ಆನಂದಮಯವಾಗುವುದು ಎಂದು ಹೇಳಿದರು.

ಕಣ್ಣಿಗೆ ಕಾಣುವುದೆಲ್ಲ ಸತ್ಯವಲ್ಲ. ಅದೆಲ್ಲವೂ ಹುಸಿ. ಈ ಮಿಥ್ಯೆಯನ್ನು ಅರಿತು ಆತ್ಮಚೈತನ್ಯವೇ ಸತ್ಯ ಎಂದು ವೇದಾಂತ ಹೇಳುವುದು ಎಂದ ಅವರು, ಸಾಮಾನ್ಯ ದೃಷ್ಟಿಗೆ ಅದು ಕಾಣುವುದಿಲ್ಲ. ಅದನ್ನು ಕಾಣಲು ಗುರು ಕೃಪೆ, ದೈವ ಕೃಪೆ ಬೇಕು. ಅದಕ್ಕಾಗಿ ಸಿದ್ಧಾರೂಢರಂತ ಮಹಾತ್ಮರ ಮಾರ್ಗದರ್ಶನವು ಅಗತ್ಯ ಎಂದರು.

ಕಾಡರಕೊಪ್ಪದ ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ, ಉಪ್ಪಾರಟ್ಟಿಯ ಶ್ರೀ ನಾಗಾನಂದ ಸ್ವಾಮೀಜಿ, ಹಂಪಿ ಹೇಮಕೂಟದ ಶ್ರೀ ವಿದ್ಯಾನಂದಭಾರತಿ ಸ್ವಾಮೀಜಿ, ಬೆಂಗಳೂರು ಸಿದ್ಧಾರೂಢ ಮಿಷನ್​ನ ಶ್ರೀ ಆರೂಢ ಭಾರತಿ ಸ್ವಾಮೀಜಿ, ಹೈದರಾಬಾದಿನ ಆಚಾರ್ಯ ಶ್ರೀ ಪರಿಶುದ್ಧಾನಂದಗಿರಿ ಮಹಾರಾಜ ಪ್ರವಚನ ನೀಡಿದರು. ಇಂಚಲ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಸಿದ್ಧಾರೂಢರ ಸಂದೇಶ ತಲುಪಲಿ : ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಶ್ರೀ ಸಿದ್ಧಾರೂಢರ ಸಂದೇಶ ಹೆಚ್ಚು ಜನರಿಗೆ ತಲುಪುವಂತಾಗಲಿ. ಈ ದಿಶೆಯಲ್ಲಿ ವಿಶ್ವ ವೇದಾಂತ ಪರಿಷತ್ ಒಂದು ದೊಡ್ಡ ಪ್ರಯತ್ನ ಎಂದು ಹೇಳಿದರು.

ಜಗದೀಶ ಶೆಟ್ಟರ್, ಶಿಲ್ಪಾ ಜಗದೀಶ ಶೆಟ್ಟರ್, ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ, ಅನ್ನದಾಸೋಹಕ್ಕೆ ಐದು ಲಕ್ಷ ರೂ ಕಾಣಿಕೆ ನೀಡಿದ ರಮೇಶ ಬಾಫಣಾ, ಗೌತಮ ಭಾಪಣಾ, ಭಕ್ತರಿಗೆ 190 ಕೆಜಿ ಲಾಡು ವಿತರಿಸಿದ ಬಾಬುರಾವ ಪ್ರಜಾಪತ್, ಮಾನವ ಹಕ್ಕುಗಳ ಉಪಾಧ್ಯಕ್ಷೆ ಅನಿತಾ ಬಡಬರಿ, ಮುಖಂಡ ಎಫ್.ಎಚ್. ಜಕ್ಕಪ್ಪನವರ, ಎಸಿಪಿ ಉಮೇಶ ಚಿಕ್ಕಮಠ, ಸಿಪಿಐ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ಆರ್. ಪಾಟೀಲ, ಅಧ್ಯಕ್ಷ ಕೆ.ಎಲ್. ಪಾಟೀಲ, ಟ್ರಸ್ಟ್ ಕಮೀಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ಮಂಜುನಾಥ ಮುನವಳ್ಳಿ, ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರು, ರಮೇಶ ಬೆಳಗಾವಿ, ಗೀತಾ ಕಲಬುರ್ಗಿ, ವಿನಾಯಕ ಘೋಡಕೆ, ಉದಯ ಕುಮಾರ ನಾಯ್ಕ, ಅಂದಾನೆಪ್ಪ ಚಾಕಲಬ್ಬಿ, ಚನ್ನವೀರ ಮುಂಗುರವಾಡಿ, ಬಿ.ಆರ್.ಬಾಗೇವಾಡಿ, ವಿ.ಡಿ.ಕಾಮರೆಡ್ಡಿ, ವಿ.ವಿ.ಮಲ್ಲಾಪುರ, ಸಿದ್ದನಗೌಡ ಪಾಟೀಲ, ವಸಂತ ಸಾಲಗಟ್ಟಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net