

ಹುಣಸೂರು: ಬುದ್ಧ, ಬಸವ ಮತ್ತು ಅಂಬೇಡ್ಕರ್ ಇಡೀ ವಿಶ್ವಕ್ಕೆ ಅರಿವಿನ ಬೆಳಕು ನೀಡಿದ ತ್ರಿಮೂರ್ತಿಗಳಾಗಿದ್ದಾರೆ ಎಂದು ಸಾಹಿತಿ ಕುಮಾರ್ ಹೊನ್ನೇನಹಳ್ಳಿ ಅಭಿಪ್ರಾಯಪಟ್ಟರು.
ತಾಲೂಕಿನ ರತ್ನಪುರಿ ಗ್ರಮದ ಸಾಧನಾಪುರ ವಿ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜು ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಹಯೋಗದಲ್ಲಿ ಶನಿವಾರ ವಿದ್ಯಾರ್ಥಿಗಳ ನಡಿಗೆ ವಚನ ಸಾಹಿತ್ಯದೆಡೆಗೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಬುದ್ಧ, ಬಸವ ಮತ್ತು ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಬುದ್ಧ ಜಗತ್ತಿಗೆ ತನ್ನ ತತ್ವಗಳ ಮೂಲಕ ಹೊಸ ಬೆಳಕನ್ನು ನೀಡಿ ಮಾನವ ಕುಲದ ಮಹಾನ್ ಚೇತನವಾಗಿ ಪರಿಗಣಿಸಲ್ಪಟ್ಟರೆ, ಬಸವ ಹೊಸ ಸಮಾಜದ ನಿರ್ಮಾಣದ ಕನಸನ್ನು ನನಸು ಮಾಡಲು ಹೊರಟು ಹಲವಾರು ಅಡೆ-ತಡೆಗಳ ನಡುವೆಯೂ ಮೌಲ್ಯಾಧಾರಿತ ಸಮಾಜವನ್ನು ನಿರ್ಮಿಸಿದ ಸಾಧಕರಾಗಿ ಲೋಕಮಾನ್ಯರಾಗಿದ್ದಾರೆ. ಆಧುನಿಕ ಕಾಲದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶಕ್ಕೆ ಅತ್ಯಂತ ಉತ್ತಮ ಸಂವಿಧಾನವನ್ನು ರಚಿಸಿ ಕೊಡುವುದರ ಮೂಲಕ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ಪ್ರಯತ್ನಿಸಿದ ಪ್ರಾತಃಸ್ಮರಣೀಯರಾಗಿದ್ದಾರೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಆಯಾ ಕಾಲಘಟ್ಟದಲ್ಲಿ ಜನರ ನೋವುಗಳಿಗೆ ಮಿಡಿದ ದಾರ್ಶನಿಕರಾಗಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಅತಿ ಆಸೆಯೇ ದುಃಖದ ಮೂಲವೆಂದು ಹೇಳುವ ಮೂಲಕ ಜಗತ್ತಿನಲ್ಲಿ ಹೊಸ ಧರ್ಮದ ಸ್ಥಾಪನೆ ಮಾಡಿ ಜನರ ಮೌಢ್ಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ ಗೌತಮ ಬುದ್ಧ, ಹನ್ನೆರಡನೇ ಶತಮಾನದಲ್ಲಿ ಕಂದಾಚಾರ, ಸಾಮಾಜಿಕ ಅಸಮಾನತೆ, ಜಾತೀಯತೆ ಮುಂತಾದವುಗಳನ್ನು ಹೋಗಲಾಡಿಸಿ ಹೊಸ ಸಮಾಜದ ಕಲ್ಪನೆಯ ಬೀಜಗಳನ್ನು ಜನಸಾಮಾನ್ಯರ ಹೃದಯಗಳಲ್ಲಿ ಬಿತ್ತುವುದರ ಮೂಲಕ ಆ ಕಾಲದಲ್ಲೇ ಅಂತರ್ಜಾತಿ ವಿವಾಹವನ್ನು ಮಾಡಿಸಿ, ಎಲ್ಲ ಜಾತಿಯ ಜ್ಞಾನಿಗಳನ್ನು ಒಂದೆಡೆ ಸೇರಿಸಿ ಅನುಭವ ಮಂಟಪವೆಂಬ ಅನುಭಾವಿಗಳ ಚಿಂತನಗೋಷ್ಠಿಗಳನ್ನು ಏರ್ಪಡಿಸಿ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದವರು ಬಸವಣ್ಣನವರು ಎಂದು ಸ್ಮರಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರೇಣುಕಪ್ರಸಾದ್, ವಿಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಮಹಾಲಿಂಗಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪುಟ್ಟಸ್ವಾಮಿ ಮಾತನಾಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಂ.ರವಿ, ಮುಖ್ಯಶಿಕ್ಷಕರಾದ ಜಿ.ಸುರೇಶ್, ಜಗದೀಶ್, ಮಲ್ಲಿಕಾರ್ಜುನ ಸ್ವಾಮಿ, ಸುಧಾಕರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಜಾನಪದ ಹಾಡುಗಾರ ಅಮ್ಮ ರಾಮಚಂದ್ರ ಕ್ರಾಂತಿ ಗೀತೆಗಳನ್ನು ಹಾಡಿದರು. ಸಮಾಜ ಸೇವಕ ರವಿಸಂತು ಅವರನ್ನು ಸನ್ಮಾನಿಸಲಾಯಿತು.