

ಮಡಿಕೇರಿ: ಕಕ್ಕಡ ಸಂದರ್ಭ ತಯಾರಿಸುವ ಆಹಾರಗಳಿಗೆ ತನ್ನದೇ ಆದ ವಿಶೇಷತೆ ಇದ್ದು, ಆಹಾರಗಳನ್ನು ಇಂದಿನ ಯುವಜನತೆಗೆ ಕಲಿಸಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಕರೆ ನೀಡಿದರು.
ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಕ್ಕಡ ನಮ್ಮೆ ಒತ್ತೋರ್ಮೆ ಕೂಟ ಹಾಗೂ ಕಕ್ಕಡ ನಮ್ಮೆ ತೀನಿ ಪೈಪೋಟಿ ೨೦೨೨ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಕ್ಕಡ ಸಂದರ್ಭ ಸೇವಿಸುವ ಆಹಾರಗಳು ಆರೋಗ್ಯಕ್ಕೆ ಪೂರಕವಾಗಿದೆ. ಕೊಡವ ಜನಾಂಗದ ಆಚಾರ, ವಿಚಾರ, ಪದ್ಧತಿ, ಪರಂಪರೆ ಹಾಗೂ ಸಂಸ್ಕೃತಿ ಅಮೂಲ್ಯವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬರದ್ದಾಗಿದೆ. ಜನಾಂಗದ ಪ್ರತಿ ಆಚರಣೆಯ ಹಿಂದೆ ವೈಜ್ಞಾನಿಕ ಚಿಂತನೆಗಳಿವೆ ಎಂದು ಹೇಳಿದರು.
ಮಹಿಳೆಯರು ಸಬಲರಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಒಕ್ಕೂಟಗಳು ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಅನುದಾನ ಕೊರತೆಯಿಂದ ಅಕಾಡೆಮಿಯಲ್ಲಿ ನಿರೀಕ್ಷಿತ ಕಾರ್ಯಕ್ರಮಗಳು ಆಗಿಲ್ಲ. ಆದರೆ, ಕೊಡವ ಸಮಾಜಗಳು, ಪೊಮ್ಮಕ್ಕಡ ಕೂಟ ಆಹಾರ ಮೇಳ ಮಾಡುವ ಮೂಲಕ ಕೊಡಗಿನ ಆಹಾರ ಪದ್ಧತಿ ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದರು.
ಮದ್ದುಸೊಪ್ಪು ಆರೋಗ್ಯವರ್ಧಕವಾಗಿದೆ. ಕಾಂಚಂಪುಳಿ ಕೊಡಗಿನಲ್ಲಿ ಮಾತ್ರ ದೊರೆಯುತ್ತದೆ. ಇಂತಹ ಆಹಾರ ಪದಾರ್ಥಗಳು, ಕೊಡಗಿನ ಅಡುಗೆಗಳು ಎಲ್ಲರಿಗೂ ಇಷ್ಟವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಕೊಡಗಿನ ಆಹಾರಗಳು ಮನ್ನಣೆಗಳಿಸಿವೆ ಎಂದರು.
ಈ ಸಂದರ್ಭ ಪವಿತ್ರ ಕಕ್ಕಡದ ಬಗ್ಗೆ ವಿಚಾರ ಮಂಡಿಸಿದರು. ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಕಾರ್ಯದರ್ಶಿ ಕನ್ನಂಡ ಸಂಪತ್, ಜನರಲ್ ತಿಮ್ಮಯ್ಯ ಶಾಲೆಯ ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ, ಗೋಣಿಕೊಪ್ಪ ಲಯನ್ಸ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಚೋಕೀರ ಪವಿತ್ರಾ ಸೇರಿದಂತೆ ಕೂಟದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ಗಮನ ಸೆಳೆದ ವಿವಿಧ ಖಾದ್ಯ
ಕಾರ್ಯಕ್ರಮದ ಅಂಗವಾಗಿ ಬಾಯಲ್ಲಿ ನೀರೂರಿಸುವ… ಮೈಬೆಚ್ಚಗಾಗಿಸುವ ತಿಂಡಿ-ತಿನಿಸುಗಳು ಗಮನ ಸೆಳೆದವು. ಕಕ್ಕಡ ಮಾಸದ ವಿಶೇಷ ಖಾದ್ಯಗಳಾದ ಮದ್ದ್‌ಪುಟ್ಟ್, ಮದ್ದ್‌ಪಾಯಸ, ಕೋಳಿಸಾರು, ಏಡಿ ಸಾರು, ಕೂವಲೆಪುಟ್ಟ್, ಬೈಂಬಳೆಕರಿ, ಹಲಸಿನ ಬೀಜದ ಚಟ್ನಿ, ಬಾಳೆನುರ್ಕ್, ಕಾಡುಮಾವಿನ ಸಾರು ಇತ್ಯಾದಿಗಳು ವಿಶೇಷ ಅನುಭವ ನೀಡಿತು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಕ್ಕಾಟಿರ ಅಂಜು ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.