

ಮೈಸೂರು: ಸಿಇಟಿ ಪರೀಕ್ಷೆ ಪ್ರವೇಶ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆದು ತುಂಡರಿಸಿರುವ ಪ್ರಕರಣ ಖಂಡಿಸಿ ಮೈಸೂರು ಬ್ರಾಹ್ಮಣ ಯುವ ವೇದಿಕೆಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ನಗರದ ಅಗ್ರಹಾರ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಾಣಿವಿಲಾಸ ರಸ್ತೆ ಮುಖಾಂತರ ಕಾಲ್ನಡಿಗೆ ಮೂಲಕ ಕೃಷ್ಣರಾಜ ಪೋಲಿಸ್ ಠಾಣೆಗೆ ತೆರಳಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದರು.
ಶಿವಮೊಗ್ಗ ಮತ್ತು ಬೀದರ್ ನಗರದಲ್ಲಿ ಸಿಇಟಿ ಪರೀಕ್ಷೆ ಪ್ರವೇಶ ಸಂದರ್ಭದಲ್ಲಿ ವಿದ್ಯಾರ್ಥಿಗೆ ಜನಿವಾರ ತುಂಡರಿಸಿರುವ ಘಟನೆ ಬ್ರಾಹ್ಮಣ ಸಮುದಾಯದ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಂದಿದೆ. ಇಂತಹ ನಡವಳಿಕೆ ಸರಿಯಲ್ಲ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಜನಿವಾರ ಎನ್ನುವುದು ಬ್ರಾಹ್ಮಣರ ಆಸ್ಮಿತೆ, ವಿಪ್ರ ಕುಟುಂಬದ ಪ್ರತಿಯೊಬ್ಬ ಗಂಡು ಮಗುವಿಗೆ 8 ವರ್ಷದಲ್ಲೆ ಬ್ರಹ್ಮೋಪದೇಶ ಮಾಡಿ ಗುರುಹಿರಿಯರು ಸಮಾಜವನ್ನು ರಕ್ಷಿಸಿ ಉತ್ತಮ ವ್ಯಕ್ತಿಯಾಗುವಂತೆ ಗಾಯತ್ರಿ ಮಂತ್ರದ ಮೂಲಕ ಉಪದೇಶ ಮಾಡಿರುತ್ತಾರೆ. ಆದರೆ ಜನಿವಾರ ತೆಗೆಯುವ ಮೂಲಕ ಇಂತಹ ಸಂಪ್ರದಾಯಕ್ಕೆ ಧಕ್ಕೆ ತರಲಾಗಿದೆ ಎಂದು ಕಿಡಿಕಾರಿದರು.
ದೇಶದ ಎಲ್ಲರಿಗೂ ತಮ್ಮದೇ ಆಚರಣೆ ಸ್ವಾತಂತ್ರ್ಯದ ಸಮಾನ ಹಕ್ಕಿದೆ. ಆದರೆ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆಯಲು ಹೋದವವರಿಗೆ ಕೇಂದ್ರದಲ್ಲಿ ಜನಿವಾರ ತೆಗೆಸಲಾಗಿದೆ. ಜನಿವಾರ ತೆಗೆಯಲು ನಿರಾಕರಿಸಿದವರನ್ನ್ನು ವಾಪಸ್ ಕಳುಹಿಸುವ ಮೂಲಕ ಪರೀಕ್ಷೆ ವಂಚಿತರಾಗುವಂತೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರಾಹ್ಮಣ ವಿದ್ಯಾರ್ಥಿಗಳಿಗೆ ನೀಡಿದ ಕಿರುಕುಳ, ಜನಿವಾರ ಕಸಿದಿರುವ ವಿಚಾರ ಇಡೀ ಬ್ರಾಹ್ಮಣ ಜನಾಂಗದ ಆಚರಣೆ ನಂಬಿಕೆ ಘನತೆಗೆ ಧಕ್ಕೆ ತಂದಿದೆ. ಸಮಾಜದಲ್ಲಿ ಅರ್ಚಕ ಪೌರೋಹಿತ್ಯ, ಅಡುಗೆ ವೃತ್ತಿ ಮೇಲೆ ಅವಲಂಬಿತವಾಗಿರುವ ಬ್ರಾಹ್ಮಣರಿಗೆ ಮನೆಯಿಂದ ಹೊರಬಂದರೆ ಇನ್ನೇನಾದರೂ ತೊಂದರೆ ಕಾದಿದೆೆಯೋ ಎನ್ನುವ ಭಯ ಕಾಡುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕೃತ್ಯವೆಸಗಿರುವ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿ ಕ್ರಮಕೈಗೊಂಡು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿಗಳಾದ ಡಿ.ಟಿ.ಪ್ರಕಾಶ್, ಡಾ. ಲಕ್ಷ್ಮೀ, ಮೇಲುಕೋಟೆ ವಂಗಿಪುರ ಮಠದ ಶ್ರೀಇಳೈ ಆಳ್ವಾರ್ ಸ್ವಾಮೀಜಿ, ಸಂಸ್ಕೃತಿ ಚಿಂತಕ ಕೆ.ರಘುರಾಮ್ ವಾಜಪೇಯಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ್, ಎಚ್.ಜಿ.ಗಿರಿಧರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ.ವಿ. ರಾಮಪ್ರಸಾದ, ಎಂ.ಡಿ.ಪಾರ್ಥಸಾರಥಿ, ಅರ್ಚಕ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್.ಶ್ರೀಧರ್‌ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್‌ಶಾಸ್ತ್ರಿ, ರವಿ ಶಾಸ್ತ್ರಿ, ಯೋಗನರಸಿಂಹ (ಮುರಳಿ), ಕಡಕೊಳ ಜಗದೀಶ್, ಜಯಸಿಂಹ, ಶ್ರೀಧರ್, ಕೆ.ಎಂ.ನಿಶಾಂತ್, ವಿಜಯ್‌ಕುಮಾರ್, ಶ್ರೀನಿವಾಸ್ ಸುಚೇಂದ್ರ, ರಂಗನಾಥ್ ಇತರರು ಇದ್ದರು.