ಸದ್ದು ಮಾಡಲಿದೆ ಡೆಮು ರೈಲು; 7ರಂದು ಸಂಚಾರ ಆರಂಭ ; ಪ್ರಯಾಣಿಕರ ಸ್ಪಂದನೆ ಮೇರೆಗೆ ಸೇವೆ

images
Published on

ತುಮಕೂರು: ಕಳೆದ ಮಾರ್ಚ್‌ನಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಹಂತ, ಹಂತವಾಗಿ ಆರಂಭಗೊಳ್ಳುತ್ತಿದ್ದು, ಬೆಂಗಳೂರಿನಿಂದ ತುಮಕೂರು, ಹಾಸನ, ಮೈಸೂರು ಸೇರಿ ವಿವಿಧೆಡೆ ಡೆಮು ರೈಲು ಸಂಚಾರಕ್ಕೆ ಡಿ.7ರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕಳೆದ ವರ್ಷ ದಸರಾ ಹಬ್ಬಕ್ಕೆ ಕೇಂದ್ರ ಸರ್ಕಾರವು ಬೆಂಗಳೂರು ಸಮೀಪದ ನಗರಗಳಿಗೆ ತೆರಳಲು ಡೆಮು (ಡೀಸೆಲ್ ಚಾಲಿತ) ರೈಲು ಕೊಡುಗೆ ನೀಡಿತ್ತು. ಆದರೆ, ಪ್ರಾಯೋಗಿಕ ಸಂಚಾರ ಆರಂಭಿಸುವ ಮುನ್ನವೇ ಕರೊನಾ ‘ರೆಡ್’ ಸಿಗ್ನಲ್ ಬಿದ್ದಿತ್ತು. ಈಗ ಮತ್ತೆ ಹಳಿಗಳ ಮೇಲೆ ರೈಲು ಸದ್ದು ಮಾಡಲಿದೆ.

ದೇಶದ ವಿವಿಧೆಡೆ ರೈಲುಗಳ ಸಂಚಾರ ಪುನರಾರಂಭದ ಹಿನ್ನೆಲೆಯಲ್ಲಿ ಉದ್ಯೋಗಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಮತ್ತೆ ಹಂತ, ಹಂತವಾಗಿ ರೈಲು ಓಡಾಟ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಹೆಚ್ಚುವರಿಯಾಗಿ ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ತುಮಕೂರು, ಮೈಸೂರು, ಹಾಸನ, ಹಿಂದುಪುರ, ಮಾರಿಕುಪ್ಪಂ, ಬಂಗಾರಪೇಟೆ ಹಾಗೂ ಹೊಸೂರು ನಗರದಿಂದ ಡೆಮು ರೈಲು ಸಂಚಾರ ಆರಂಭಿಸಲಾಗುತ್ತಿದೆ. ಭಾನುವಾರ ಹೊರತುಪಡಿಸಿ ವಾರದ ಆರು ದಿನ ಸಂಚಾರವಿರಲಿದೆ.

ಯಶವಂತಪುರದಿಂದ 8 ಬೋಗಿಗಳ ಡೆಮು ರೈಲು ಸಂಜೆ 6.35ಕ್ಕೆ ಹೊರಟು ರಾತ್ರಿ 8ಕ್ಕೆ ತುಮಕೂರು ತಲುಪಲಿದೆ. ತುಮಕೂರಿನಿಂದ ಬೆಳಗ್ಗೆ 7.30ಕ್ಕೆ ಹೊರಟು 9ಕ್ಕೆ ಯಶವಂತಪುರ ತಲುಪಲಿದೆ. ಅದೇ ರೀತಿ ಯಶವಂತಪುರ-ಹಾಸನ ನಡುವಿನ 8 ಬೋಗಿಗಳ ಡೆಮು ರೈಲು ಬೆಳಗ್ಗೆ 9.30ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 1ಕ್ಕೆ ಹಾಸನ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 1.30ಕ್ಕೆ ಹೊರಟು ಸಂಜೆ 5ಕ್ಕೆ ಯಶವಂತಪುರ ತಲುಪಲಿದೆ.

ಬಂಗಾರಪೇಟೆ- ಮೈಸೂರು- ಬಂಗಾರಪೇಟೆ, ಎಸ್‌ಬಿಸಿ-ಮಾರಿಕುಪ್ಪಂ -ಎಸ್‌ಬಿಸಿ, ಹಿಂದುಪುರ - ಯಶವಂತಪುರ-ಹಿಂದುಪುರ ಹಾಗೂ ಎಸ್‌ಬಿಸಿ-ಹೊಸುರು-ಎಸ್‌ಬಿಸಿ ನಡುವೆ 16 ಬೋಗಿಗಳ ರೈಲು ಪ್ರತಿನಿತ್ಯ ಸಂಚರಿಸಲಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಬೆಂಗಳೂರಿಗೆ ವ್ಯಾಪಾರ, ಉದ್ಯೋಗಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ.

ಪ್ರಾಯೋಗಿಕವಾಗಿ ಆರಂಭಗೊಂಡಿರುವ ರೈಲು ಸಂಚಾರ ಪ್ರಯಾಣಿಕರ ಸ್ಪಂದನೆ ಮೇಲೆ ಅವಲಂಬನೆಗೊಂಡಿದೆ. ಉತ್ತಮ ಸ್ಪಂದನೆ ದೊರೆತಲ್ಲಿ ರೈಲು ಸಂಚಾರ ಮುಂದುವರಿಸುವ ಬಗ್ಗೆ ರೈಲ್ವೆ ಇಲಾಖೆ ತೀರ್ಮಾನ ಕೈಗೊಳ್ಳಲಿದೆ.

ಯಶವಂತಪುರ-ತುಮಕೂರು ನಡುವೆ ಡೆಮು ರೈಲು ಸೇವೆ ಆರಂಭವಾಗುತ್ತಿರುವುದು ಉತ್ತಮ ನಡೆ. ಕರೊನಾದಿಂದ ಸೇವೆ ಸ್ಥಗಿತಗೊಂಡಿದ್ದು, ಈಗ ಪ್ರತಿನಿತ್ಯ ಬೆಂಗಳೂರು ತೆರಳುವವರಿಗೆ ರೈಲ್ವೆ ಸೇವೆ ಮತ್ತೆ ದೊರೆಯಲಿದೆ. ಬೆಂಗಳೂರು-ತುಮಕೂರು ನಡುವೆ ರೈಲು ಸಂಚಾರ ಆರಂಭಿಸಬೇಕೆಂಬ ರೈಲ್ವೆ ಪ್ರಯಾಣಿಕರ ವೇದಿಕೆ ಮನವಿಗೆ ರೈಲ್ವೆ ಸಚಿವಾಲಯ ಹಾಗೂ ವಲಯ ಅಧಿಕಾರಿಗಳು ಸ್ಪಂದಿಸಿದ್ದಾರೆ. ಕರಣಂರಮೇಶ್ ಕಾರ್ಯದರ್ಶಿ, ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net