

ವಿಜಯಪುರ: ಗ್ರಾಮೀಣರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸುತ್ತಿರುವ ಮಹತ್ತರ ಯೋಜನೆಗಳು ಹಳ್ಳ ಹಿಡಿದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿ ಮೇಲಾಗಲಿ, ಜನಪ್ರತಿನಿಧಿಗಳ ಮೇಲಾಗಲಿ ಕಿಂಚಿತ್ ಕ್ರಮವಾಗದಿರುವುದು ನೋಡಿದರೆ ಭ್ರಷ್ಟಾಚಾರದ ಪಾಲು ಕೆಳಹಂತದಿಂದ ಮೇಲಿನ ಹಂತದವರೆಗೂ ಸಂದಾಯವಾಗಿರುವ ಸಾರ್ವಜನಿಕರ ಅನುಮಾನ ದಿಟವೆನ್ನಿಸುತ್ತದೆ.
ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಕಲುಷಿತ ನೀರು ಶುದ್ಧೀಕರಿಸಿ ಪೂರೈಸುವ ಉದ್ದೇಶದಿಂದ ಸ್ವಚ್ಛ ಭಾರತ ಯೋಜನೆ ಎಲ್ಡಬ್ಲೂಎಂ (ಲಿಕ್ವಿಡ್ ವೇಸ್ಟ್ ಮ್ಯಾನೇಜ್ಮೆಂಟ್) ಅಡಿ ನೀರು ಶುದ್ಧೀಕರಿಸುವ ಕಾಮಗಾರಿ ಕಳಪೆಯ ವರದಿ ಪ್ರಕಟಗೊಂಡ ಬೆನ್ನಲ್ಲೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಉದ್ಯಾನದ ಅದ್ವಾನ ಕೂಡ ಬೆಳಕಿಗೆ ಬಂದಿದೆ.
ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹತ್ತಿರದಲ್ಲಿ ನಿರ್ಮಾಣಗೊಂಡ ವಿಶಾಲ ಉದ್ಯಾನದ ಕಾಮಗಾರಿ ಕಳಪೆಯಾಗಿದ್ದು, ಲಕ್ಷಾಂತರ ರೂಪಾಯಿ ಭ್ರಷ್ಟಾಚಾರದ ಆರೋಪಕ್ಕೆ ಸಾಕ್ಷಿ ಒದಗಿಸುತ್ತಿದೆ. ಎಲ್ಲೆಂದರಲ್ಲಿ ಕಿತ್ತು ಬಿದ್ದಿರುವ ನೆಲ ಹಾಸು, ಉದುರಿದ ಸಿಮೆಂಟ್, ಹಾಳಾದ ಪಾದಚಾರಿ ಪಥಗಳು ಸೇರಿದಂತೆ ಹಲವು ಕಾಮಗಾರಿಗಳು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿಯಾಗಲಿ, ಪ್ರತಿಕ್ರಿಯೆಯಾಗಲಿ, ಸ್ಪಷ್ಟನೆಯಾಗಲಿ ನೀಡದೇ ನುಣುಚಿಕೊಳ್ಳುತ್ತಿರುವುದು ಭ್ರಷ್ಟಾಚಾರದ ಗುಮಾನಿಗೆ ಮೊದಲ ಸಾಕ್ಷಿಯಾಗಿದೆ.
ಕಾಮಗಾರಿ ಅಪೂರ್ಣ? : ಸುಂದರ ಪುಷ್ಪ, ಅಲಂಕಾರಿಕ ಸಸಿಗಳಿಂದ ಕಂಗೊಳಿಸಬೇಕಿದ್ದ ಉದ್ಯಾನ ಮುಳ್ಳು ಕಂಟಿಗಳಿಂದ ಆವೃತವಾಗಿ ಸ್ಮಶಾನ ಸದೃಶವಾಗಿ ಗೋಚರಿಸುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೈಗೊಂಡ ಉದ್ಯಾನದ ಕಾಮಗಾರಿಯೇ ಅಪೂರ್ಣ ಎನ್ನಲಾಗಿದೆ. ಅರ್ಧಂರ್ಬಧ ಕಾಮಗಾರಿ ಕೈಗೊಂಡು ಅನುದಾನ ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಪಿಡಿಒ ಬಳಿ ಯಾವುದೇ ಉತ್ತರ ಇಲ್ಲ. ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಣ ಕೆಂಡಾಮಂಡಲಗೊಂಡ ಪಿಡಿಒ ವಿರೂಪಾಕ್ಷಿ ನಾಡಗೌಡ ಒಂದೇ ಸಮ ಅಬ್ಬರಿಸುತ್ತಾರಲ್ಲದೇ, ದೂರು ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸುತ್ತಾರೆ. ರಾದರೂ ಯಾಕೆ ದೂರು ದೂರು ಕೊಡಬೇಕು? ಅಗತ್ಯವಿದ್ದರೆ ಪ್ರತಿಕ್ರಿಯೆ ನೀಡಬಹುದು ಇಲ್ಲದೇ ಹೋದರೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಂದ ಪಡೆಯಲಾಗುವುದು ಎಂದರೆ ಪಿತ್ತ ನೆತ್ತಿಗೇರಿಸಿಕೊಂಡು ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಂತೆ ಮಾತನಾಡಿದರು. ಕೊನೆಗೆ ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಅವರನ್ನು ಸಂಪರ್ಕಿಸಲಾಗಿ ಹಂದಿಗನೂರ ಪ್ರಕರಣದ ತನಿಖೆ ನಡೆಸಲಾಗುವುದಲ್ಲದೇ ಪಿಡಿಒಗೆ ಸಭ್ಯವಾಗಿ ವರ್ತಿಸುವಂತೆ ಸೂಚಿಸುವುದಾಗಿ ಪ್ರತಿಕ್ರಿಯಿಸಿದರು. ಅಲ್ಲದೇ, ಶ್ರೀದಲ್ಲಿಯೇ ಗ್ರಾಮದ ಕಾಮಗಾರಿಗಳ ಮಾಹಿತಿ ಪೂರೈಸುವುದಾಗಿ ತಿಳಿಸಿದರು.
ಹಗರಣಗಳ ಸರಮಾಲೆ : ಹಂದಿಗನೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆ, ಶೌಚಗೃಹಗಳು ಹಾಗೂ ಕಟ್ಟಡಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆ ಮತ್ತು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವಿದೆ. ಮಾತ್ರವಲ್ಲ, ಅರ್ಧಕ್ಕೆ ನಿಂತ ಕಾಮಗಾರಿಗಳು, ದಾಖಲೆಗಳು ಭ್ರಷ್ಟಾಚಾರಕ್ಕೆ ಪುಷ್ಟಿ ನೀಡುತ್ತಿವೆ. ಈ ಬಗ್ಗೆ ಸಾರ್ವಜನಿಕರು ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಹೂಳೆತ್ತುವ ಕಾಮಗಾರಿಯಡಿ ಲಕ್ಷಾಂತರ ರೂಪಾಯಿ ಬಿಲ್ ತೆಗೆಯಲಾಗಿದೆ. ಯಂತ್ರೋಪಕರಣ ಬಳಸಿ ಕೆಲವು ಕೆಲವೆಡೆ ಹೂಳೆತ್ತಿದ್ದರೆ ಇನ್ನೂ ಕೆಲವು ಕಡೆ ಹೂಳು ತೆಗೆಯದೇ ಹಣ ಎತ್ತಿದ್ದಾರೆಂಬ ಆರೋಪವಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂಬ ಒತ್ತಾಯವಿದೆ. ನೀರು ನಿರ್ವಹಣೆ ಹಾಗೂ ವಿದ್ಯುತ್ ಬಲ್ಬ್ ಮತ್ತಿತರ ನಿರ್ವಹಣೆ ಹೆಸರಿನಲ್ಲಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ, ಈ "ನಿರ್ವಹಣೆ' ಕೇವಲ ದಾಖಲೆಯಲ್ಲಿ ಮಾತ್ರವಿದೆ ಎಂಬುದು ಸಾರ್ವಜನಿಕರ ಅಂಬೋಣ. ತನಿಖೆ ಬಳಿಕವೇ ಸತ್ಯಾಂಶ ಹೊರಬೀಳಲಿದೆ.