‘ಆಶ್ರಯ’ದಲ್ಲಿ ಈಗ ‘ಆಮಿಷ’ದ ಸದ್ದು

ayanur manju
Published on

ಶಿವಮೊಗ್ಗ: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಫೆ.26ರಂದು ಶಿವಮೊಗ್ಗಕ್ಕೆ ಆಗಮಿಸಿ ಗೋವಿಂದಾಪುರದಲ್ಲಿ ಆಶ್ರಯ ಮನೆಗಳ ಹಂಚಿಕೆ ಮಾಡಲಿರುವ ಸಂದರ್ಭದಲ್ಲಿಯೇ ಲಾಟರಿಯಲ್ಲಿ ನಿಮ್ಮ ಹೆಸರು ಬರುವಂತೆ ನೋಡಿಕೊಳ್ಳುತ್ತೇವೆ ಎಂದು ಕೆಲವರು ಫಲಾನುಭವಿಗಳಿಂದ 50 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ಗಂಭೀರ ಆರೋಪ ಮಾಡಿದರು.

500 ಫಲಾನುಭವಿಗಳನ್ನು ಕೇಂದ್ರೀಕರಿಸಿ ಒಟ್ಟು 2.50 ಕೋಟಿ ರೂ. ಸಂಗ್ರಹ ಮಾಡಲಾಗುತ್ತಿದೆ. ನೀವು ಬಯಸಿದ ಮನೆಗಳೇ ನಿಮಗೆ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದು ಫಲಾನುಭವಿಗಳನ್ನು ಹಾದಿ ತಪ್ಪಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಯನೂರು ತಿಳಿಸಿದ್ದಾರೆ.

ಹೀಗೆ ಹಣ ಸಂಗ್ರಹ ಮಾಡುತ್ತಿರುವವರು ಯಾರು? ಈ ಹಣ ಯಾರಿಗೆ ಸಂದಾಯವಾಗಲಿದೆ ಎಂಬುದರ ಬಗ್ಗೆ ಗುಟ್ಟುಬಿಡದ ಆಯನೂರು, ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗೆ ಹಣ ಸಂಗ್ರಹ ಮಾಡುತ್ತಿರುವವರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದ್ದಾರೆ.

ಯಾರಾದರೂ ಹಣ ಕೇಳಿದರೆ ಫಲಾನುಭವಿಗಳು ಎಚ್ಚರದಿಂದ ಇರಬೇಕು. ಹಣ ನೀಡಿ ಮೋಸ ಹೋಗಬಾರದು. ಒಂದು ವೇಳೆ ಈಗಾಗಲೇ ಹಣ ನೀಡಿದ್ದರೆ ಪಡೆದವರ ಕಪಾಳಕ್ಕೆ ಬಾರಿಸಿ ಹಣ ಹಿಂದಕ್ಕೆ ಪಡೆಯಿರಿ. ಮೋಸ ಹೋದವರ ಪರವಾಗಿ ನಾನಿದ್ದೇನೆ ಎಂದು ಆಯನೂರು ಅಭಯ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net