ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ಮನುಷ್ಯರಲ್ಲಿ ಎಷ್ಟೇ ಭಿನ್ನತೆ ಇದ್ದರೂ ಎಲ್ಲರಲ್ಲಿರುವ ಆತ್ಮ ಒಂದೇ. ಆತ್ಮವೇ ಪರಮಾತ್ಮನ ಸ್ವರೂಪ ಎಂದು ಥಿಯಾಸಫಿ ವ್ಯಾಸಂಗದ ರಾಷ್ಟ್ರೀಯ ಉಪನ್ಯಾಸಕ ಡಾ.ಎಲ್.ನಾಗೇಶ್ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಬ್ರಹ್ಮವಿದ್ಯಾ ಸಮಾಜದಿಂದ ಹಮ್ಮಿಕೊಂಡಿದ್ದ ಥಿಯಾಸಫಿ ವ್ಯಾಸಂಗದ ಗೋಷ್ಠಿಯಲ್ಲಿ ಮಾತನಾಡಿ, ಮಾನವ ಜೀವನದ ಮುಖ್ಯ ಉದ್ದೇಶ ಆತ್ಮದ ಆಧ್ಯಾತ್ಮಿಕ ಮುಕ್ತಿ ಮತ್ತು ಜ್ಞಾನಾರ್ಜನೆ. ಇದರಲ್ಲಿ ಪುನರ್ಜನ್ಮ ಮತ್ತು ಆತ್ಮದ ಅನಂತತೆಯ ತತ್ವಗಳೂ ಸೇರಿವೆ. ವ್ಯಾಸಂಗವು ತತ್ವಶಾಸ್ತ್ರ, ಧರ್ಮ ಮತ್ತು ಮಾನವನ ಆಧ್ಯಾತ್ಮಿಕ ಶಕ್ತಿಗಳ ಅಧ್ಯಯನಕ್ಕೆ ಒತ್ತು ನೀಡುತ್ತದೆ. ಜೀವನದ ಆಳವಾದ ಅರ್ಥ ಮತ್ತು ಸತ್ಯವನ್ನು ಅರಿಯಲು ಪ್ರಯತ್ನಿಸಬೇಕು. ಥಿಯಾಸಫಿ ವ್ಯಾಸಂಗದಲ್ಲಿ ಮಾನವ ಸಮಾಜದಲ್ಲಿ ಜಾತಿ, ಧರ್ಮ, ಲಿಂಗ, ವರ್ಗ ಅಥವಾ ಬಣ್ಣದ ಭೇದವಿಲ್ಲದೆ ಸರ್ವ ಮಾನವರ ನಡುವೆ ಸಹೋದರತ್ವವನ್ನು ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿದೆ. ಎಲ್ಲ ಧರ್ಮಗಳ ತತ್ವಗಳನ್ನು ಗೌರವಿಸುವುದು ಮತ್ತು ಅವುಗಳ ಮಧ್ಯೆ ಏಕತೆ ಕಂಡುಹಿಡಿಯುವುದು ಗೋಷ್ಠಿಯ ಮುಖ್ಯ ಸಂಗತಿ ಎಂದರು.
ಥಿಯಾಸಫಿ ಉಪನ್ಯಾಸಕಿ ಡಾ.ಜ್ಯೋತಿ ನಾಗೇಶ್ ಮಾತನಾಡಿ, ಥಿಯಾಸಫಿ 1875ರಲ್ಲಿ ಸ್ಥಾಪಿತವಾದ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಸಂಘಟನೆ. ಸಮಾಜದಲ್ಲಿ ಭೇದ-ಭಾವ ಇಲ್ಲದ ವಿಶ್ವಭ್ರಾತೃತ್ವ ನಿರ್ಮಾಣ, ವೈಚಾರಿಕತೆಯ ತುಲನಾತ್ಮಕ ಅಧ್ಯಯನ ಮತ್ತು ಪ್ರಕೃತಿ ನಿಯಮ ಹಾಗೂ ಮಾನವನ ಸುಪ್ತ ಶಕ್ತಿಗಳನ್ನು ಪತ್ತೆ ಹಚ್ಚುವುದು ಸಂಘಟನೆ ಉದ್ದೇಶ ಎಂದರು.
ಬ್ರಹ್ಮವಿದ್ಯಾ ಸಮಾಜದ ಅಧ್ಯಕ್ಷ ಬಿ.ಕೆ.ವೇಣು, ಸದಸ್ಯರಾದ ಬಳೆ ರಘು, ಎಸ್.ಎಸ್.ಶಂಕರ್, ಕೆ.ಶ್ರೀನಾಥ್, ಚಿಕ್ಕಮುನಿಯಪ್ಪ, ಬಿ.ಸಿ.ನಂದೀಶ್ ಇದ್ದರು.