ಸೊರಗುತ್ತಿವೆ ಮುಸುಕಿನ ಜೋಳ, ರಾಗಿ ಪೈರು

06 HANUR 1
ಹನೂರು ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಜಮೀನೊಂದರಲ್ಲಿ ರಾಗಿ ಪೈರುಗಳು ಒಣಗುತ್ತಿರುವುದು.
Published on

ಹನೂರು: ತಾಲೂಕು ವ್ಯಾಪ್ತಿಯಲ್ಲಿ ಒಂದು ತಿಂಗಳಿಂದ ಸಮರ್ಪಕವಾಗಿ ಮಳೆಯಾಗದ ಪರಿಣಾಮ ಜಮೀನುಗಳಲ್ಲಿ ಮುಸುಕಿನ ಜೋಳ ಹಾಗೂ ರಾಗಿ ಪೈರುಗಳು ಬಿಸಿಲಿನ ತಾಪಕ್ಕೆ ಸೊರಗುತ್ತಿವೆ. ಇದರಿಂದ ರೈತಾಪಿ ವರ್ಗದಲ್ಲಿ ಆತಂಕ ಮನೆ ಮಾಡಿದೆ.

ತಾಲೂಕಿನಲ್ಲಿ ಹೆಚ್ಚಿನ ರೈತರು ಖುಷ್ಕಿ ಭೂಮಿ ಹೊಂದಿದ್ದು, ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಬಹುತೇಕ ರೈತರು ವರ್ಷಕ್ಕೆ ಒಂದೇ ಬೆಳೆ ಬೆಳೆದರೆ, ಕೆಲವರು 2 ಬೆಳೆ ಬೆಳೆಯುತ್ತಾರೆ. ಪೂರ್ವ ಮುಂಗಾರಿನಲ್ಲಿ ಮೂರು ತಿಂಗಳ ಬೆಳೆಯಾದ ಎಳ್ಳು ಹಾಗೂ ಸಜ್ಜೆ ಹಾಗೂ ಮುಂಗಾರಿನಲ್ಲಿ ಹೆಚ್ಚಾಗಿ ರಾಗಿ ಹಾಗೂ ಮುಸುಕಿನ ಜೋಳವನ್ನು ಬಿತ್ತನೆ ಮಾಡುತ್ತಾರೆ. ಕಳೆದ ವರ್ಷ ಮುಂಗಾರು ಮಳೆ ಕೊರತೆಯ ಪರಿಣಾಮ ತಕ್ಕಮಟ್ಟಿಗೆ ರಾಗಿ ಫಸಲು ರೈತರ ಕೈ ಹಿಡಿದಿತ್ತು. ಆದರೆ ಸಕಾಲದಲ್ಲಿ ಮಳೆಯಾಗದ ಪರಿಣಾಮ ಬಹುತೇಕ ಕಡೆಗಳಲ್ಲಿ ಮುಸುಕಿನ ಜೋಳದ ಫಸಲು ರೈತರ ಕೈ ಹಿಡಿಯದಂತಾಗಿತ್ತು. ಈ ಬಾರಿ ಪೂರ್ವ ಮುಂಗಾರಿನಲ್ಲಿ ಮಳೆಯಾದ್ದರಿಂದ ರೈತರು ಎಳ್ಳು ಹಾಗೂ ಸಜ್ಜೆಯನ್ನು ಬಿತ್ತನೆ ಮಾಡಿದ್ದರು. ಆದರೆ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಫಸಲು ಒಣಗಿದ್ದವು.

ತಿಂಗಳ ಹಿಂದೆ ಆಗಾಗ್ಗೆ ಸಾಧಾರಣಾ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಬಹುತೇಕ ರೈತರು ರಾಗಿ ಹಾಗೂ ಮುಸುಕಿನ ಜೋಳವನ್ನು ಬಿತ್ತನೆ ಮಾಡಿದ್ದು, ಪೈರುಗಳು ಬಂದಿವೆ. ಆದರೆ ಕಳೆದ ತಿಂಗಳಿನಿಂದಲೂ ಮಳೆ ಬೀಳದ ಪರಿಣಾಮ ಕೆಲವು ಜಮೀನುಗಳಲ್ಲಿ ಅರ್ಧಂಬರ್ಧ ಪೈರುಗಳು ಬಂದಿದ್ದರೆ, ಬಹುತೇಕ ಜಮೀನುಗಳಲ್ಲಿ ಪೈರುಗಳು ಬಿಸಿಲಿನ ತಾಪಕ್ಕೆ ಸೊರಗುತ್ತಿವೆ. ಇದು ರೈತರನ್ನು ಚಿಂತೆಗೀಡು ಮಾಡಿದ್ದು, ಈ ಬಾರಿಯೂ ಕೃಷಿಯಲ್ಲಿ ನಷ್ಟವನ್ನು ಎದುರಿಸಬೇಕಾಗುತ್ತದೆಯೋ ಎಂಬ ಆತಂಕ ಕಾಡುತ್ತಿದೆ.

ಬಿತ್ತನೆಯಾಗಿರುವ ಪ್ರದೇಶ: ತಾಲೂಕಿನ ಹನೂರು ಹೋಬಳಿ ವ್ಯಾಪ್ತಿಯಲ್ಲಿ 12,513 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಿದೆ. ಇದರಲ್ಲಿ 1,888 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಹಾಗೂ 735 ಹೆಕ್ಟೇರ್‌ನಲ್ಲಿ ರಾಗಿಯನ್ನು ಬಿತ್ತನೆ ಮಾಡಲಾಗಿದೆ. ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ 7,666 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಿದ್ದು, ರಾಗಿ ಬಿತ್ತನೆ ಮಾಡುವ 3,028 ಹೆಕ್ಟೇರ್‌ನ ಪೈಕಿ 600 ಹೆಕ್ಟೇರ್‌ಗೂ ಹೆಚ್ಚು ಬಿತ್ತನೆಯಾಗಿದೆ. ಇನ್ನು ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 7,116 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಿದ್ದು, ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಈ ಬಾರಿ ಇನ್ನೂ ಬಹುತೇಕ ಕಡೆಗಳಲ್ಲಿ ಬಿತ್ತನೆ ಕಾರ್ಯದಲ್ಲಿ ಗುರಿ ಸಾಧಿಸಿಲ್ಲ.

ಕೃಷಿಗೆ ವರುಣನ ಕೊರತೆ: ತಾಲೂಕಿನಲ್ಲಿ ಈ ವರ್ಷ ಆಗಬೇಕಿದ್ದ ಮಳೆ ವಾಡಿಕೆಗಿಂತಲೂ ಕಡಿಮೆಯಾಗಿರುವುದೇ ಕೃಷಿಗೆ ತೊಡಕಾಗಿ ಪರಿಣಮಿಸಿದೆ. ಜನವರಿಯಲ್ಲಿ ವಾಡಿಕೆ ಮಳೆ 2.70 ಮಿಲಿ ಮೀಟರ್‌ಗೆ 5.60 ಮಿ.ಮೀ ಮಳೆಯಾಗಿದ್ದರೆ, ಫೆಬ್ರವರಿಯಲ್ಲಿ ಮಳೆಯಾಗಿಲ್ಲ. ಮಾರ್ಚ್‌ನಲ್ಲಿ 11.80 ಮಿ.ಮೀಗೆ 18.20ಮಿ.ಮೀ, ಏಪ್ರಿಲ್‌ನಲ್ಲಿ 56.60ಮಿ.ಮೀಗೆ 85.70 ಮಿ.ಮೀ, ಮೇನಲ್ಲಿ 111.40 ಮಿ.ಮೀಗೆ 97.80 ಮಿ.ಮೀ, ಜೂನ್‌ನಲ್ಲಿ 48 ಮಿ.ಮೀಗೆ 12 ಮಿ.ಮೀ, ಜುಲೈನಲ್ಲಿ 52 ಮಿ.ಮೀಗೆ 28.60 ಮಿ.ಮೀ ಹಾಗೂ ಆಗಸ್ಟ್‌ನಲ್ಲಿ 61.40 ಮಿ.ಮೀಗೆ 59 ಮಿ.ಮೀ ಮಾತ್ರವಷ್ಟೇ ಮಳೆಯಾಗಿದ್ದು, ಒಟ್ಟಾರೆ ವಾಡಿಕೆಯಂತೆ ಶೇಕಡ 59ರಷ್ಟು ಮಳೆ ಕೊರತೆಯಾಗಿದೆ. ಇದೀಗ ಸೆಪ್ಟೆಂಬರ್‌ನಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಇದರಿಂದ ಪೈರುಗಳು ಜೀವಜಲವಿಲ್ಲದೆ ಮುದುರಿ ಹೋಗುತ್ತಿವೆ. ಇದರಿಂದ ನಷ್ಟದ ಮುನ್ಸೂಚನೆ ಈಗಲೇ ರೈತರನ್ನು ಕಾಡುತ್ತಿದೆ.

ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯ; ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಹನೂರು ತಾಲೂಕಿನಲ್ಲಿ ಈ ವರ್ಷ ಮಳೆಯ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖ ಕಂಡಿದೆ. ಪರಿಣಾಮ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಪ್ರಮಾಣ ದಿನೇ ದಿನೆ ಕಡಿಮೆಯಾಗುತ್ತಿದೆ. ಬಹುತೇಕ ಕೆರೆ- ಕಟ್ಟೆ, ಚೆಕ್‌ಡ್ಯಾಂ ಹಾಗೂ ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿತದಿಂದ ತಾಲೂಕು ವ್ಯಾಪ್ತಿಯ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇತ್ತ ಪೈರುಗಳು ಒಣಗುತ್ತಿದ್ದು, ಕೃಷಿಗೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ತಲೆದೋರಬಹುದು. ಆದ್ದರಿಂದ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ರೈತರು ಹಾಗೂ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ.

ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಈಗಾಗಲೇ ಬಂದಿರುವ ಪೈರುಗಳಿಗೆ ಮಳೆ ಅತ್ಯವಶ್ಯಕವಾಗಿದೆ. ಹಾಗಾಗಿ ಮುಂದಿನ ಒಂದು ವಾರದೊಳಗೆ ಮಳೆ ಬಾರದೇ ಇದ್ದಲ್ಲಿ ಪೈರುಗಳು ಸಂಪೂರ್ಣ ಒಣಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ರೈತರು ಚಿಂತೆಗೊಳಗಾಗಿದ್ದು, ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ನಾನು 2 ಎಕರೆಯಲ್ಲಿ ರಾಗಿಯನ್ನು ಬಿತ್ತನೆ ಮಾಡಿದ್ದೆ. ಆದರೆ ಸಕಾಲದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ನಷ್ಟ ಎದುರಿಸುವಂತಾಗಿತ್ತು.. ಈ ವರ್ಷ ತಿಂಗಳ ಹಿಂದೆ ಬಿದ್ದ ಸಾಧಾರಣಾ ಮಳೆಗೆ ರಾಗಿಯನ್ನು ಬಿತ್ತನೆ ಮಾಡಲಾಗಿತ್ತು. ಆದರೆ ಒಂದು ತಿಂಗಳಿನಿಂದಲೂ ಮಳೆ ಕೈ ಕೊಟ್ಟಿರುವ ಪರಿಣಾಮ ಈಗಾಗಲೇ ಬಹುತೇಕ ಪೈರುಗಳು ಒಣಗಿವೆ. ಇದರಿಂದ ನಷ್ಟ ಅನುಭವಿಸುವ ಆತಂಕ ಎದುರಾಗಿದೆ. ತಾಲೂಕಿನ ರೈತರದ್ದೂ ಇದೇ ಪರಿಸ್ಥಿತಿ. ಆದ್ದರಿಂದ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು.

ಚಿಕ್ಕರಾಜು ರೈತ, ಮಲ್ಲಯ್ಯನಪುರ ಗ್ರಾಮ

ಹನೂರು ಭಾಗದ ಬಹುತೇಕ ಕಡೆಗಳಲ್ಲಿ ಈಗಾಗಲೇ ರಾಗಿ, ಅವರೆ ಹಾಗೂ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದ್ದು, ಪೈರುಗಳು ಬಂದಿವೆ. ಪ್ರದೇಶಗಳಿಗೆ ತೆರಳಿ ಪರಿಶೀಲಿಸಲಾಗಿದ್ದು, ಮಳೆಯಿಲ್ಲದ ಪರಿಣಾಮ ಪೈರುಗಳು ಸೊರಗುತ್ತಿವೆ. ಹಾಗಾಗಿ ಈ ವಾರದಲ್ಲಿ ಮಳೆ ಬಾರದೇ ಇದ್ದಲ್ಲಿ ಒಣಗುವ ಸಾಧ್ಯತೆ ಹೆಚ್ಚಾಗಿದೆ.

ನಾಗೇಂದ್ರ ಕೃಷಿ ಅಧಿಕಾರಿ, ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net