

ಕೋಲಾರ: ನಗರದ ಕಾರಂಜಿಕಟ್ಟೆಯ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಕರಗದ ಪೂಜಾರಿ ಮುನಿರಾಜು ಕರಗ ನೃತ್ಯ ಮಾಡುತ್ತಿದ್ದಾಗ ಹಲವು ವರ್ಷ ಕರಗ ಹೊತ್ತಿದ್ದ ತಂದೆ ನಾಗರಾಜ್ ತಮ್ಮ ಮಗನೊಂದಿಗೆ ನೃತ್ಯ ಮಾಡಿದ್ದಲ್ಲದೇ ಮಗನ ಕಲಾ ನೈಪುಣ್ಯತೆಗೆ ಆನಂದ ಭಾಷ್ಪ ಸುರಿಸಿದರು.
ಜನಮನ್ನಣೆ ಗಳಿಸಿರುವ ಕಾರಂಜಿಕಟ್ಟೆಯ ಹೂವಿನ ಕರಗ ಮಹೋತ್ಸವದಲ್ಲಿ ಕಳೆದ ಹಲವು ವರ್ಷಗಳಿಂದ ಕರಗ ಹೊರುತ್ತಿರುವ ಬೇತಮಂಗಲದ ಖ್ಯಾತ ಕರಗದ ಪೂಜಾರಿ ಬೇಗಮಂಗಲ ನಾಗರಾಜ್ರಿಗೆ ವಯಸ್ಸಾದ ಹಿನ್ನೆಲೆ ಅವರ ಪುತ್ರ ಮುನಿರಾಜು ಮೂರನೇ ಬಾರಿ ದೇವಾಲಯದ ಮುಂಭಾಗ ನಿರ್ಮಿಸಿದ್ದ ಪುಷ್ಪಾಲಂಕೃತ ವೇದಿಕೆ ಹಾಗೂ 7ನೇ ಕ್ರಾಸ್ನಲ್ಲಿನ ವೇದಿಕೆಯಲ್ಲಿ ಮಂಗಳ ವಾದ್ಯ, ಹಲಗೆಗಳ ಲಯಬದ್ಧ ತಾಳಕ್ಕೆ ತಕ್ಕಂತೆ ನೃತ್ಯ ಪ್ರದರ್ಶಿಸಿದರು.
ವೀರ ಕುಮಾರರು ಸುತ್ತಲೂ ಗೋವಿಂದಾ ಗೋವಿಂದಾ ಉದ್ಗಾರಗಳ ನಡುವೆ ಕರಗ ನೃತ್ಯಕ್ಕೆ ಜನರ ಜೈಕಾರಗಳ ಕರತಾಡನ ಮುಗಿಲು ಮುಟ್ಟಿತ್ತು.
ದೇವಾಲಯ, ಬೀದಿಗಳನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕಾರ ಮಾಡಲಾಗಿತ್ತು.
ಕಾರಂಜಿ ಕಟ್ಟೆಯ ತಿಗಳ ಜನಾಂಗ ಕರಗವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಭಕ್ತಿಯಿಂದ ನಡೆಸಿಕೊಂಡು ಬಂದಿದ್ದು, ಇವರು ಮಾತ್ರವಲ್ಲದೇ ಸಮಾಜದ ಅನೇಕ ಮಂದಿ ಕರಗಕ್ಕೆ ಪೂಜೆ ಸಲ್ಲಿಸಿ ಭಕ್ತಿ ಪ್ರದರ್ಶಿಸಿದರು.
ಹೂವಿನ ಕರಗದೊಂದಿಗೆ ರಕ್ಷಕ ಭಟರಂತೆ ಕತ್ತಿ ಹಿಡಿದು ಸಂಚರಿಸುವ ವೀರಕುಮಾರರು ಕರಗ ನೃತ್ಯದ ವೇದಿಕೆಯ ಮೇಲೆ ಕತ್ತಿ ಝಳುಪಿಸುತ್ತಾ ನೀಡಿದ ಹಲಗು ಸೇವೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು.
ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಕರಗಕ್ಕೆ ಜನತೆ ಪೂಜೆ ಸಲ್ಲಿಸಿದರು. ಇದಾದ ನಂತರ ಶುಕ್ರವಾರ ಸಂಜೆ ದೇವಾಲಯದ ಮುಂಭಾಗ ಅಗ್ನಿಕುಂಡ ಪ್ರವೇಶ ನಡೆಯಿತು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕರಗ ನೃತ್ಯಕ್ಕೆ ಜಾನಪದ ಕಲಾ ತಂಡಗಳು ಮೆರಗು ನೀಡಿದ್ದು, ನಗರ ಸೇರಿ ವಿವಿಧೆಡೆಗಳಿಂದ ಬಂದ ಸಹಸ್ರಾರು ಮಂದಿ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು.
ಕರಗ ಮಹೋತ್ಸವಕ್ಕೆ ನಸೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ಕುಮಾರ್, ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್, ಜಿಲ್ಲಾ ತಿಗಳ ಸಮನ್ವಯನ ಸಮಿತಿ ಗೌರವಾಧ್ಯಕ್ಷ ಎಲ್.ಎ.ಮಂಜುನಾಥ್, ಅಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ಪಲ್ಲವಿ ಮಣಿ, ಉಪಾಧ್ಯಕ್ಷ ನಾರಾಯಣಸ್ವಾಮಿ, ಸಮಿತಿ ಪದಾಧಿಕಾರಿಗಳಾದ ಶಂಕರಪ್ಪ, ಮುನಿಯಪ್ಪ, ಪ್ರಕಾಶ್, ಮೋಹನ್ ಬಾಬು, ಸಮಿತಿ ಪ್ರಧಾನ ಕಾರ್ಯದರ್ಶಿ ಪಾಲ್ಗುಣ, ಬಂಗಾರಪೇಟೆ ಶ್ರೀನಿವಾಸ್, ಚಿನ್ನರಾಜು ಇತರರು ಇದ್ದರು.