

ನರಗುಂದ: ಫೈನಾನ್ಸ್ ಬಡ್ಡಿ ದಂಧೆಕೋರರ ಹಾವಳಿಯಿಂದ ಜನರನ್ನು ರಕ್ಷಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ, ತಾಲೂಕಿನಲ್ಲಿ ಬಡ್ಡಿ ದಂಧೆಕೋರರ ಉಪಟಳಕ್ಕೆ ಯುವಕನೊಬ್ಬ ಪಾಲಕರಿಗೆ ಗೊತ್ತಿಲ್ಲದಂತೆ ಮನೆ ಅಡ ಇಟ್ಟು ನಾಪತ್ತೆಯಾಗಿದ್ದಾನೆ. ಮಗನನ್ನು ಹುಡುಕಿಕೊಡುವಂತೆ ತಂದೆ- ತಾಯಿ ಈಗ ಪೊಲೀಸರ ಮೊರೆ ಹೋಗಿದ್ದಾರೆ.
ತಾಲೂಕಿನ ಕೊಣ್ಣೂರಿನ ಪ್ರದೀಪ ಮಲ್ಲಿಕಾರ್ಜುನ ಕಿರಗೆ (23) ಊರು ತೊರೆದಿದ್ದು, ಈತನ ಪಾಲಕರು ನಿತ್ಯ ಕಣ್ಣೀರಿಡುವಂತಾಗಿದೆ.
ಪ್ರಕರಣದ ವಿವರ: ಆನ್ಲೈನ್ ಆಟದ ಗೀಳಿಗೆ ಬಿದ್ದಿದ್ದ ಪ್ರದೀಪ ಪ್ರಾರಂಭದಲ್ಲಿ ಸಣ್ಣಪುಟ್ಟ ಸಾಲ ಮಾಡಿದ್ದ. ಈ ಸಾಲ ಹಾಗೂ ಬಡ್ಡಿ ಹಣ ತೀರಿಸಲು ಎರಡು ವರ್ಷದ ಹಿಂದೆ ಕೆಲ ಬಡ್ಡಿ ದಂಧೆಕೋರರಿಂದ ತಿಂಗಳಿಗೆ ಶೇ 10ರ ಬಡ್ಡಿಯಲ್ಲಿ 10 ಲಕ್ಷ ರೂ. ಸಾಲ ಪಡೆದಿದ್ದ. ಮಾಡಿರುವ ಸಾಲದ ಹಣದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್, ಕುಕುಡುಕೂ, ಕೋಕ್ರೊಚ್ ಆನ್ಲೈನ್ ಬೆಟ್ಟಿಂಗ್ ಆಡಿ ಎಲ್ಲ ಹಣ ಕಳೆದುಕೊಂಡಿದ್ದಾನೆ. 10 ಲಕ್ಷ ರೂಪಾಯಿ ಬಡ್ಡಿ ತೀರಿಸುವುದಕ್ಕೆ ತಾಯಿ ಮಹಾದೇವಿ ಹೆಸರಿನಲ್ಲಿದ್ದ ಹೊಸ ಮನೆಯ ಮೇಲೆ ರಾಮದುರ್ಗದ ಖಾಸಗಿ ಬ್ಯಾಂಕ್ನಲ್ಲಿ 10 ಲಕ್ಷ ರೂಪಾಯಿ ಸಾಲ ತೆಗೆದಿದ್ದಾನೆ. ಇದಕ್ಕಾಗಿ ತಾಯಿಗೆ ಸುಳ್ಳು ಹೇಳಿ ದಾಖಲಾತಿಗಳಿಗೆ ಸಹಿ ಪಡೆದಿದ್ದ. ದಂಧೆಕೋರರ ಕಿರುಕುಳ ಹೆಚ್ಚಾದಂತೆ ಸಣ್ಣ- ಪುಟ್ಟ ಕೈಗಡ ಹಾಗೂ ಮನೆಯ ಅಡಮಾನ ಸೇರಿ ಸದ್ಯ 10 ಲಕ್ಷ ರೂಪಾಯಿ ಸಾಲಕ್ಕೆ 70 ರಿಂದ 80 ಲಕ್ಷ ರೂಪಾಯಿ ಬಡ್ಡಿ ಆಗಿದೆ. ಪ್ರದೀಪನಿಗೆ ಹಣ ನೀಡಿರುವ ಬಡ್ಡಿ ದಂಧೆಕೋರರು ಅಸಲು, ಬಡ್ಡಿ, ಚಕ್ರಬಡ್ಡಿ ಹಣ ಕೇಳುತ್ತಿರುವುದರಿಂದ ಹಣ ಹೊಂದಿಸಲಾಗದೆ ಊರು ಬಿಟ್ಟಿದ್ದಾನೆ.
ಕೊಣ್ಣೂರ ಹಾಗೂ ನರಗುಂದ ಪೊಲೀಸರಿಗೆ ಪಾಲಕರು ದೂರು ಕೊಡಲು ಹೋಗಿದ್ದಾರೆ. ಮಗನನ್ನು ಹುಡುಕಿಕೊಡುವುದರ ಜತೆಗೆ ನಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಪ್ರದೀಪನ ತಂದೆ ಮಲ್ಲಿಕಾರ್ಜುನ, ತಾಯಿ ಮಹಾದೇವಿ ಜಿಲ್ಲಾ ಪೊಲೀಸರನ್ನು ಕೋರಿದ್ದಾರೆ.