ಮೂವರೂ ಶಿಕ್ಷಕಿಯರ ವರ್ಗಾವಣೆಯೇ ಪರಿಹಾರ

MDG meet
ಕಿರುಗುಂದ ಗ್ರಾಪಂ ಕಚೇರಿಯಲ್ಲಿ ಡಿಡಿಪಿಐ ಜಿ.ಕೆ.ಪುಟ್ಟರಾಜ್ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಸ್ಥರ ಸಭೆ ನಡೆಸಿತು. ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ, ಕೆ.ಆರ್.ದಿನೇಶ್, ಹರಿಭಾರ್ಗವ, ಕೆ.ಕೆ.ರಾಮಯ್ಯ ಇತರರಿದ್ದರು.
Published on

ಮೂಡಿಗೆರೆ: ಕಿರುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೆ.ಪುಟ್ಟರಾಜ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಶಿಕ್ಷಕಿಯರ ವಿರುದ್ಧ ಗ್ರಾಪಂ, ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ನೀಡಿದ್ದ ಪ್ರತ್ಯೇಕ ದೂರು ಪರಿಶೀಲಿಸಿದರು.

ಮಕ್ಕಳ ದಾಖಲಾತಿ ಕುಂಠಿತ, ಕಲಿಕೆಯಲ್ಲಿ ಮಕ್ಕಳು ಹಿಂದುಳಿದಿರುವುದು, ಶಾಲೆ ಸುತ್ತ ಗಿಡಗಳು ಬೆಳೆದಿದ್ದರೂ ಸ್ವಚ್ಛಗೊಳಿಸಿಲ್ಲ. ಶೌಚಗೃಹ ಸ್ವಚ್ಛತೆಯಿಲ್ಲ. ಬಾಗಿಲು ಇಲ್ಲ. ಮೂವರು ಶಿಕ್ಷಕಿಯರ ನಿತ್ಯ ಜಗಳ, ಮಕ್ಕಳ ಟಿಸಿ ಪಡೆಯಲು ಪಾಲಕರಿಂದ ಅರ್ಜಿ, ಎಸ್‌ಡಿಎಂಸಿ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆಗೆ ಮುಂದಾಗಿರುವುದು ಇತರ ಅವ್ಯವಸ್ಥೆ ಪರಿಶೀಲಿಸಿ ಶಿಕ್ಷಕಿಯರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡುತ್ತಿದ್ದಂತೆ ಗ್ರಾಮಸ್ಥರು ಗ್ರಾಪಂ ಆವರಣದಲ್ಲಿ ಜಮಾಯಿಸಿ ಮೂವರೂ ಶಿಕ್ಷಕಿಯರನ್ನು ಕೂಡಲೆ ಅಮಾನತುಪಡಿಸಬೇಕು. ಅಲ್ಲಿಯವರೆಗೆ ನಾವು ಶಾಲೆ ಆವರಣಕ್ಕೆ ಬರುವುದಿಲ್ಲ. ಗ್ರಾಪಂ ಸಭಾಂಗಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ನಮ್ಮ ಅಹವಾಲು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದಾಗ, ಅಧಿಕಾರಿಗಳ ತಂಡ ಗ್ರಾಪಂ ಸಭಾಂಗಣಕ್ಕೆ ತೆರಳಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.
ಈ ವೇಳೆ ಆಕ್ರೋಶ ಹೊರಹಾಕಿದ ಗ್ರಾಮಸ್ಥರು, ನಿತ್ಯ ಜಗಳವಾಡುವ ಶಿಕ್ಷಕಿಯರನ್ನು ಅಮಾನತುಪಡಿಸಿ, ಬೇರೆ ಮೂವರು ಶಿಕ್ಷಕರನ್ನು ನಿಯೋಜಿಸಬೇಕು. ಇಲ್ಲವಾದರೆ ಈಗ ದಾಖಲಾಗಿರುವ 34 ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನಮಗೆ ನೀಡಬೇಕು. ಅಲ್ಲದೆ ಎಸ್‌ಡಿಎಂಸಿ ಸದಸ್ಯರೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದರು.
ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ ಮಾತನಾಡಿ, ಗ್ರಾಪಂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಶಿಕ್ಷಕಿಯರು ಗೌರವ ನೀಡದೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಶಾಲೆಯಲ್ಲಿ ಮಕ್ಕಳೆದುರು ನಿರಂತರವಾಗಿ ಜಗಳವಾಡುತ್ತ ಕಾಲ ಕಳೆಯುತ್ತಾರೆ. ಮಕ್ಕಳು ಪಾಠದಿಂದ ವಂಚಿತರಾಗಿದ್ದಾರೆ. ಹಿಂದೆ ಇದೇ ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದರು. ಈ ಬಾರಿ ಶಿಕ್ಷಕಿಯರ ಜಗಳದಿಂದ ಪಾಲಕರು ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಿದ್ದಾರೆ. ಹೀಗೇ ಮುಂದುವರಿದರೆ ಶಾಲೆ ಮುಚ್ಚುವ ಸ್ಥಿತಿಗೆ ತಲುಪಲಿದೆ ಎಂದು ತಿಳಿಸಿದರು.
ಗ್ರಾಮಸ್ಥ ಕೆ.ಕೆ.ರಾಮಯ್ಯ ಮಾತನಾಡಿ, ಕಳೆದ ವರ್ಷ ಮಕ್ಕಳ ಆಹಾರಧಾನ್ಯ ಮತ್ತು ಹಾಲಿನ ಪುಡಿಯನ್ನು ಮುಖ್ಯಶಿಕ್ಷಕಿ ಸಾಗಿಸುವಾಗ ಗ್ರಾಮಸ್ಥರು ಹಿಡಿದು ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತರಕಾರಿ ಮಾರಾಟದ ವಾಹನವನ್ನು ಶಾಲೆ ಆವರಣಕ್ಕೆ ಕರೆದೊಯ್ದು ಬಿಸಿಯೂಟಕ್ಕೆ ತರಕಾರಿ ಖರೀದಿಸುವ ನೆಪದಲ್ಲಿ ಆಹಾರಧಾನ್ಯ ಮತ್ತು ಹಾಲಿನ ಪುಡಿಯನ್ನು ಜನರ ಕಣ್ಣು ತಪ್ಪಿಸಿ ತರಕಾರಿ ವಾಹನದಲ್ಲಿ ಸಾಗಿಸುತ್ತಾರೆ. ನಾವು ಹಲವಾರು ಬಾರಿ ಶಿಕ್ಷಕಿಯರ ವಿರುದ್ಧ ದೂರು ನೀಡಿ ಪ್ರತಿಭಟನೆ ನಡೆಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಇನ್ನೆರಡು ದಿನದಲ್ಲಿ ಮೂವರೂ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಂಡು ಶಾಲೆಗೆ ಬೇರೆ ಶಿಕ್ಷಕರನ್ನು ನೇಮಿಸಬೇಕು. ಇಲ್ಲವಾದರೆ ಪಾಲಕರು 34 ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗೆ ದಾಖಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಎಸ್‌ಡಿಎಂಸಿ ಸಭೆಯ ತೀರ್ಮಾನ ದಾಖಲಿಸದೆ ಸಭೆಯಿಂದ ಮುಖ್ಯಶಿಕ್ಷಕಿ ಎದ್ದು ಹೋಗುತ್ತಾರೆ. ಪ್ರಶ್ನಿಸಿದರೆ ಬಟ್ಟೆ ಹರಿದುಕೊಂಡು ರಸ್ತೆಗೆ ಓಡಿ ಹೋಗುತ್ತೇನೆ. ಪೊಲೀಸರಿಗೆ ದೂರು ನೀಡುತ್ತೇನೆಂದು ಬೆದರಿಕೆ ಹಾಕುತ್ತಾರೆ. ಶಾಲೆ ಆವರಣಕ್ಕೆ ಎಸ್‌ಡಿಎಂಸಿ ಸದಸ್ಯರು ಅಥವಾ ಮಕ್ಕಳ ಪಾಲಕರು ಭೇಟಿ ನೀಡಿದರೆ ಅವರ ವಿಡಿಯೋ ಚಿತ್ರೀಕರಣ ಮಾಡುತ್ತಾರೆ. ಇದರಿಂದ ಶಾಲೆ ಆವರಣಕ್ಕೆ ಯಾರೊಬ್ಬರೂ ಬರುತ್ತಿಲ್ಲ. ಮೂವರು ಶಿಕ್ಷಕಿಯರ ಜಗಳದಿಂದ ಶಾಲೆಯ ವಾತಾವರಣ ಹದಗೆಟ್ಟಿದೆ. ಶಿಕ್ಷಕಿಯರ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಎಸ್‌ಡಿಎಂಸಿ ಸದಸ್ಯರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹರಿಭಾರ್ಗವ ಎಚ್ಚರಿಸಿದರು.
ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಡಿಡಿಪಿಐ ಜಿ.ಕೆ.ಪುಟ್ಟರಾಜ್, ಮೂವರೂ ಶಿಕ್ಷಕಿಯರು ನಿತ್ಯ ಜಗಳವಾಡುತ್ತಿರುವುದು, ಇತರ ದೂರುಗಳು ಬಂದಿವೆ. ಬಿಇಒ ಮತ್ತು ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಕಳಿಸಿದ್ದೆ. ಅವರು ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಈಗ ನಾನು ಪರಿಶೀಲನೆ ನಡೆಸಲು ಬಂದಿದ್ದೇನೆ. 5 ವರ್ಷದಿಂದ ಶಾಲೆಯ ದಾಖಲಾತಿ ಸೇರಿದಂತೆ ಎಲ್ಲವನ್ನೂ ಪರಿಶೀಲನೆ ನಡೆಸಲಾಗುವುದು. ಜಿಲ್ಲೆಯ ಯಾವುದೆ ಶಾಲೆಯ ಶಿಕ್ಷಕರ ವಿರುದ್ಧ ಇಷ್ಟು ದೊಡ್ಡ ಮಟ್ಟದಲ್ಲಿ ದೂರುಗಳು ಬಂದಿರಲಿಲ್ಲ. ಶಿಕ್ಷಕರ ವರ್ಗಾವಣೆ ನಿಯಮಾನಸಾರ ಕೌನ್ಸೆಲಿಂಗ್ ಮೂಲಕ ಮಾಡಬೇಕಾಗಿದೆ. ದೂರಿನ ಆಧಾರದಲ್ಲಿ ವರ್ಗಾವಣೆ ಮಾಡಬಹುದಾಗಿದೆ. ಒಂದೆರಡು ದಿನದಲ್ಲಿ ಮೂವರೂ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಕೆ.ಆರ್.ದಿನೇಶ್, ಮಾಜಿ ಅಧ್ಯಕ್ಷರಾದ ಯು.ಎಚ್.ರಾಜಶೇಖರ್, ಬಿ.ಕೆ.ಚಂದ್ರಶೇಖರ್, ಅಬ್ಬಾಸ್, ಕೆ.ಆರ್.ಲೋಕೇಶ್, ಗುಲಾಂ ಮಹಮ್ಮದ್, ಕೆ.ಆರ್.ಮಂಜುನಾಥ್, ಚನ್ನಕೇಶವ, ಪರಮೇಶ, ಕೆ.ಎ.ರವಿಕುಮಾರ್, ಶಿವರಾಜ್, ಮನೋಜ್, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಸ್ಮಿತಾ, ಶಿವಕುಮಾರ್, ಪುರುಷೋತ್ತಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net