

ಚಿಮ್ಮಡ: ಖಾಸಗಿ ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಅನುದಾನದಲ್ಲಿ ಗ್ರಾಮೀಣ ಭಾಗಗಳ ಶಾಲೆಗಳನ್ನು ಆಯ್ದುಕೊಂಡು ಅಭಿವೃದ್ಧಿ ಪಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ಥಳೀಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬೇಗಳುರಿನ ಯಸ್ಕಾವಾ ಸಂಸ್ಥೆ ಶಾಲೆಗೆ ನೀಡಿದ ಆಧುನಿಕ ಪಾಠೋಪಕರಣ ಹಾಗೂ ಪೀಠೋಪಕರಣಗಳ ಉದ್ಘಾಟನೆ ಮತ್ತು ಅಭಿನಂದನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ವಿದ್ಯಾಧರ ಸವದಿ ಉದ್ಘಾಟಿಸಿ ಮಾತನಾಡಿ, ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದರೂ ನೂತನ ತಂತ್ರಜ್ಞಾನ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ. ಯಸ್ಕಾವಾದಂಥಹ ಸಂಸ್ಥೆಗಳು ಗ್ರಾಮೀಣ ಭಾಗದ ಮಕ್ಕಳಿಗೆ ಅಂತಹ ತಂತ್ರಜ್ಞಾನದ ಸಲಕರಣೆಗಳನ್ನು ನೀಡಿ ಅಭಿವೃದ್ಧಿಪಡಿಸುವ ಮೂಲಕ ತಮ್ಮ ಕಳಕಳಿ ತೋರುತ್ತಿವೆ ಎಂದರು.
ಯಸ್ಕಾವಾ ಸಂಸ್ಥೆಯ ಉಪ ವ್ಯವಸ್ಥಾಪಕ ವಿಜಯಕುಮಾರ ಹಂಡಿ ಮಾತನಾಡಿ, ಶಾಲೆಯಲ್ಲಿ ಅಂಕಗಳಿಕೆ ಮಾತ್ರ ಉನ್ನತ ಸಾಧನೆಗೆ ಮಾನದಂಡವಲ್ಲ. ಸತತ ಪರೀಶ್ರಮ, ಉತ್ತಮ ಗುರಿಯೊಂದಿಗೆ ಮುನ್ನಡೆದರೆ ಯಾವುದೇ ಸಾಧನೆ ಸಾಧ್ಯವಾಗಿಸಬಹುದು ಎಂದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯೆ ಎಂ.ಎಸ್. ಜಿಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಆರ್‌ಪಿ ರಮೇಶ ಅವಟಿ, ವಿಶಾಲ ಹೊಸಮನಿ ಮಾತನಾಡಿದರು.
ಯಸ್ಕಾವಾ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ ಬ್ಯಾಕೋಡ, ರಾಜೇಶರೆಡ್ಡಿ, ರಾಘವೇಂದ್ರ ಕೆ. ಕಾರ್ಯದರ್ಶಿ ಮಹೇಶಕುಮಾರ, ಉಪ ವ್ಯವಸ್ಥಾಪಕ ವಿಜಯಮಹಾಂತೇಶ ಹಂಡಿ, ಪ್ರಶಾಂತ ಹಿರೇಮಠ ಹಾಗೂ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶಾಲ ಹೊಸಮನಿಯವರನ್ನು ಸತ್ಕರಿಸಿ ಗೌರವಿಸಲಾಯಿತು.
ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು, ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ, ಉಪಾಧ್ಯಕ್ಷೆ ಪದ್ಮಾವತಿ ಭಜಂತ್ರಿ ಮತ್ತಿತರರಿದ್ದರು. ಶಿಕ್ಷಕಿ ಉಷಾ ಕಟ್ಟಿಮನಿ ಸ್ವಾಗತಿಸಿದರು. ಉಪನ್ಯಾಸಕ ಪ್ರವೀಣ ಮೈತ್ರಿ ನಿರೂಪಿಸಿದರು ಹಾಗೂ ವಿ.ಡಿ. ತುಬಾಕಿ ವಂದಿಸಿದರು.