

ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ನಿವಾಸಿ ವೀರೇಶ ಅಂಗಡಿ ಎಂಬುವವರ ಮನೆಯ ಸ್ನಾನದ ಕೊಠಡಿ ಸೇರಿ ಭುಸುಗುಡುತ್ತಿದ್ದ 6 ಅಡಿ ಉದ್ದದ ನಾಗರಹಾವನ್ನು ಪೈಪ್ ಬ್ಯಾಗಿಂಗ್ ತಂತ್ರದ ಮೂಲಕ ರಕ್ಷಿಸಿ ಸೋಮವಾರ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಉರಗ ತಜ್ಞ ಮಂಜುನಾಥ ನಾಯಕ ಅವರು ಪೈಪ್ ಬ್ಯಾಗಿಂಗ್ ತಂತ್ರದಿಂದ ಅಂದರೆ, ಕನಿಷ್ಠ 1 ಅಡಿ ಉದ್ದದ ಪೈಪ್ ತೆಗೆದುಕೊಂಡು ಅದರ ಇನ್ನೊಂದು ಬದಿಗೆ ಚೀಲವನ್ನು ಬಿಗಿಯಾಗಿ ಕಟ್ಟಿ ಹಾವಿನ ಮುಂದೆ ಇಟ್ಟಿದ್ದಾರೆ. ಆಗ ಹಾವು ಬೀಲವೆಂದುಕೊಂಡು ಪೈಪ್ ಮೂಲಕ ಚೀಲದ ಒಳಗೆ ತಾನಾಗಿಯೇ ಸೇರಿಕೊಂಡಿದೆ. ನಂತರ ಹಾವನ್ನು ದೂರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಹೀಗಾಗಿ ಮನೆ ಹಾಗೂ ಸುತ್ತಮುತ್ತಲಿನ ನಿವಾಸಿಗಳ ಆತಂಕವನ್ನು ದೂರ ಮಾಡಿದ್ದಾರೆ. ಇವರಿಗೆ ವಿರೂಪಾಕ್ಷಪ್ಪ ಸರ್ವೀ, ಅನಿಲ ಕಿಟಗೇರಿ, ಬಸವರಾಜ ರೇಣುಕಮಠ, ಆನಂದ ಮುಖನವರ ಸಹಾಯ ಮಾಡಿದ್ದಾರೆ.