ಕೖೊಲ ಗ್ರಾಮದ ಆನೆಗುಂಡಿ ಎಂಬಲ್ಲಿ ಕೖೊಲ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದ ಜಾಗದಲ್ಲಿ ಬೃಹತ್ ತಾಜ್ಯ ರಾಶಿ ಇರುವುದರಿಂದ ಪರಿಸರ ದುರ್ನಾತ ಬೀರುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಒಂದು ವರ್ಷದಿಂದ ಇದೇ ಜಾಗದಲ್ಲಿ ರಾತ್ರಿ ವೇಳೆ ಕಸ ಸುರಿಯಲಾಗುತ್ತಿದ್ದು, ಗಾಳಿ ರಭಸದಿಂದ ಬೀಸಿದಾಗ ಇಲ್ಲಿ ಸಂಗ್ರಹಗೊಂಡ ತ್ಯಾಜ್ಯ ಸುತ್ತಮುತ್ತಲಿನ ಮನೆಗಳ ಅಂಗಳದ ತನಕವೂ ಬರುತ್ತಿದೆ. ಘನತ್ಯಾಜ್ಯಗಳ ಜತೆಗೆ ಹಸಿ ಕಸಗಳನ್ನೂ ಸುರಿಯುವುದರಿಂದ ಗುಡ್ಡಕ್ಕೆ ಮೇಯಲು ಬರುವ ಹಸುಗಳು ಪ್ಲಾಸ್ಟಿಕ್ ಸೇವಿಸಿ ಅನಾರೋಗ್ಯಕ್ಕೊಳಗಾಗಿವೆ.
ತ್ಯಾಜ್ಯಗಳನ್ನು, ಕಸಗಳನ್ನು ಸುರಿದು ಆನೆಗುಂಡಿ ಪರಿಸರವನ್ನು ಮಲಿನಗೊಳಿಸುವವರನ್ನು ಪತ್ತೆಹಚ್ಚು ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಆನೆಗುಂಡಿ ಪರಿಸರದ ಜನರು ಈಗಾಗಲೇ ಕೖೊಲ ಪಂಚಾಯಿತಿಗೆ ದೂರು ನೀಡಿದ್ದು, ಕ್ರಮಕೈಗೊಳ್ಳುವುದಾಗಿ ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತಾಜ್ಯ ಸುರಿದಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ಕಸದಲ್ಲಿ ಸಿಕ್ಕಿರುವ ವಾಹಿತಿ ಆಧರಿಸಿ ಕಸ ಸುರಿದವರನ್ನು ಪತ್ತೆಮಾಡಿ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ಪೊಲೀಸರಿಗೆ ದೂರು ನೀಡಲಾಗುತ್ತದೆ. ಸ್ವಚ್ಚ ಪರಿಸರಕ್ಕಾಗಿ ಪಣತೊಟ್ಟ ಗ್ರಾ.ಪಂ ಆಶಯಕ್ಕೆ ವಿರುದ್ಧವಾಗಿದ್ದರೆ ಕಾನೂನುಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಆನೆಗುಂಡಿ ಪರಿಸರದಲ್ಲಿ ತಾಜ್ಯ ರಾಶಿಯ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಪ್ರತಿ ಮನೆಯಿಂದ ಕಸ ಸಂಗ್ರಹಿಸುವ ಸಂಕಲ್ಪದೊಂದಿಗೆ ಕಸ ಸಂಗ್ರಹಿಸಲಾಗುತ್ತಿದೆ. ಜತೆಗೆ ತಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಹಲವರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಇನ್ನು ಕೆಲವರು ಈ ಬಗ್ಗೆ ಸ್ಪಂದಿಸಿಲ್ಲ. ಪರಿಸರ ನೈರ್ಮಲ್ಯ ಕಾಪಾಡುವ ದಷ್ಟಿಯಿಂದ ಎಲ್ಲರು ಸಹಕರಿಸಬೇಕು.