ನಿದ್ದೆ ಕದ್ದ ಬೇಡರವೇಷ

SRS vesha
Published on

ಶಿರಸಿ: ಸರಿ ರಾತ್ರಿ ಕಳೆದರೂ ನಗರದ ಜನ ನಿದ್ದೆ ಮಾಡುತ್ತಿಲ್ಲ. ಮಹಿಳೆಯರು, ಮಕ್ಕಳೂ ಸೇರಿದಂತೆ ನಗರವಾಸಿಗಳೆಲ್ಲ ನಿದ್ದೆ ಬಿಟ್ಟು ರಸ್ತೆ ಪಕ್ಕ ನಿಲ್ಲುತ್ತಿದ್ದಾರೆ. ನಾಡಿನಲ್ಲಿಯೇ ಅಪರೂಪದ ಕಲೆ, ಶಿರಸಿಯಲ್ಲಿ ಮಾತ್ರ ಕಾಣ ಸಿಗುವ ಬೇಡರವೇಷ ಈಗ ಪರಾಕಾಷ್ಟೆ ತಲುಪಿದೆ.

ಕೆಂಪು ವಸ್ತ್ರಧಾರಿಯಾಗಿ ತಲೆಯ ಮೇಲೆ ಕೋಡುಗಳಿರುವ ಕಿರೀಟ, ಬೆನ್ನ ಹಿಂದೆ ನವಿಲುಗರಿಗಳಿಂದ ಮಾಡಿದ ಬೃಹತ್ ಕಿರೀಟ, ಮುಖಕ್ಕೆ ಭರ್ಜರಿ ಮೀಸೆ, ನೋಡುಗರನ್ನು ಭಯ ಬೀಳಿಸುವಂತಹ ಕಲಾವಿದನ ನೃತ್ಯದ ಸೊಬಗನ್ನು ಜನ ಆಸ್ವಾದಿಸುತ್ತಿದ್ದಾರೆ. ಅಬ್ಬರದ ಹಲಗೆ ಶಬ್ದ, ಜನರ ಸಿಳ್ಳೆಯ ಅಬ್ಬರದ ನಡುವೆ ಯಾವ ತಂಡ ಉತ್ತಮ ಪ್ರದರ್ಶನ ನೀಡಿದೆ, ಯಾವ ತಂಡ ಸಾಧಾರಣ ಎಂಬುದನ್ನು ಜನರೇ ಅಳೆದು ತೂಗುತ್ತಿದ್ದಾರೆ.

70ಕ್ಕೂ ಅಧಿಕ ತಂಡಗಳು ಈ ಬಾರಿ ಪ್ರದರ್ಶನ ನೀಡುತ್ತಿವೆ. ಮೊದಲ ದಿನವಾದ ಸೋಮವಾರ ಸಂಜೆ ಭೀಮನಗುಡ್ಡ ಮಕ್ಕಳ ಬೇಡರವೇಷ, ರಾಮನಬೈಲ್ ಹೋಳಿ ಸಮಿತಿಯಿಂದ ಬೇಡರವೇಷ, ಮಾರಿಗುಡಿ ಬಾಳೆಕಾಯಿ ಚಾಳದಿಂದ ಮಕ್ಕಳ ಹೋಳಿ, ಮಾರಿಕಾಂಬಾ ನಗರದ ಹಾಲಹೊಂಡ ಬಡಾವಣೆಯತಂಡ, ಮಾರಿಕಾಂಬಾ ದೇವಸ್ಥಾನದ ಬಾಬುದಾರ, ಮಿತ್ರ ಮಂಡಳಿಯಿಂದ ಬೇಡರವೇಷ ಪ್ರದರ್ಶನಗೊಂಡಿತು.

ಮಂಗಳವಾರ ಸಂಜೆ ಭೂತೇಶ್ವರ ಮಂಡಳಿ, ಶ್ರೀರಾಮ ಕಾಲನಿ ತಂಡ, ಅಗಸೇಬಾಗಿಲು ಗೆಳೆಯರ ಬಳಗ, ಹಳೇ ಬಸ್ ನಿಲ್ದಾಣದ ತಂಡ, ಮಾರಿಕಾಂಬಾ ದೇವಸ್ಥಾನ ನೌಕರರ ವರ್ಗ, ಕೋಟೆಗಲ್ಲಿ ತಂಡ, ಆಟೋ ಸ್ಟ್ಯಾಂಡ್, ರಾಮನಬೈಲ್‌ನ ಎರಡು ತಂಡಗಳು, ಅಂಬಾಗಿರಿ, ಸಿಂಪಿಗಲ್ಲಿ, ಮಾರಿಗುಡಿ ಯುವಕ ಮಂಡಳದ ಎರಡು ತಂಡಗಳು ಪ್ರದರ್ಶನ ನೀಡಿವೆ. ಬುಧವಾರ 6 ತಂಡಗಳು ಬೇಡರ ವೇಷದ ಪ್ರದರ್ಶನ ನೀಡಲಿವೆ.

ಬೇಡರವೇಷ ಪಾತ್ರಧಾರಿ ಸಿದ್ಧಗೊಂಡ ಬಳಿಕ ಹಲಗೆಯ ಬಡಿತ, ಬಂಡಿ, ಸಾರ್ವಜನಿಕರೊಂದಿಗೆ ಹೊರಡುವ ತಂಡ, ನಗರದ ವಿವಿಧ ಬಡಾವಣೆಗಳಲ್ಲಿ ನೃತ್ಯ ಪ್ರದರ್ಶಿಸಿ ಬಳಿಕ ಬಸ್ ಸ್ಟ್ಯಾಂಡ್ ವೃತ್ತ, ಮಾರಿಕಾಂಬಾ ದೇವಾಲಯದ ಎದುರಿನಲ್ಲಿ ಪ್ರದರ್ಶನ ನೀಡುತ್ತಾರೆ. ಹೀಗಾಗಿ, ಬಸ್ ಸ್ಟಾಂಡ್ ವೃತ್ತ, ಮಾರಿಕಾಂಬಾ ದೇವಾಲಯ ಬಳಿ ಜನ ಜಂಗುಳಿ ಇರುತ್ತದೆ.

ಬೇಡರ ವೇಷ ವೀಕ್ಷಿಸಲು ಹೊರ ಜಿಲ್ಲೆಯ ಜನ ಶಿರಸಿಗೆ ಬರುತ್ತಿದ್ದಾರೆ. ಪ್ರತಿ ರಾತ್ರಿಯೂ ನಗರದ ಮೂಲೆ ಮೂಲೆಯಲ್ಲಿ ತಮಟೆಯ ಸದ್ದು ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net