ಕೊಡಗಿನಲ್ಲಿ ಗಗನಮುಖಿಯಾದ ಹಂದಿ ಮಾಂಸ ಬೆಲೆ

The skyrocketing price of pork in Kodagu
Published on

ಮಡಿಕೇರಿ:

ಕೊಡಗು ಎಂದ ಕೂಡಲೇ ’ಪಂದಿ ಕರಿ’ ನೆನಪಿಗೆ ಬರುವುದು ಸಹಜ. ಮದುವೆ ಸೇರಿದಂತೆ ಯಾವುದೇ ಸಮಾರಂಭಗಳು ಇಲ್ಲಿ ನಡೆದರೂ ಹಂದಿ ಮಾಂಸದ ಖಾದ್ಯ ಇಲ್ಲದೆ ಊಟದ ಮೆನು ಪರಿಪೂರ್ಣ ಆಗುವುದಿಲ್ಲ. ಆದರೆ ಏರಿಕೆ ಆಗುತ್ತಿರುವ ಹಂದಿ ಮಾಂಸದ ದರ ಸ್ಥಳೀಯ ಮಾಂಸ ಪ್ರಿಯರನ್ನು ಚಿಂತೆಗೀಡು ಮಾಡಿದೆ. ಮುಂದೆ ಮದುವೆ ಸೀಸನ್ ಶುರುವಾಗಲಿದ್ದು, ಜಿಲ್ಲೆಯಲ್ಲಿ ಹಂದಿ ಮಾಂಸಕ್ಕೆ ಕೆಜಿಗೆ ೫೦೦ ರೂ. ದಾಟಿದರೂ ಅಚ್ಚರಿಯಿಲ್ಲ ಎನ್ನುವ ಅಭಿಪ್ರಾಯ ವ್ಯಾಪಾರಿಗಳಿಂದ ವ್ಯಕ್ತವಾಗುತ್ತಿದೆ.

ಕಾರ್ಯಕ್ರಮಗಳಲ್ಲಿ ಬಳಕೆಯಾಗುವ ಹಂದಿ ಮಾಂಸದ ಪ್ರಮಾಣದ ಮೇಲೆ ಆ ಕಾರ್ಯಕ್ರಮದ ಅದ್ಧೂರಿತನವನ್ನು ಅಳೆಯುವ ಪರಿಪಾಟ ಜಿಲ್ಲೆಯಲ್ಲಿ ರೂಢಿಯಲ್ಲಿದೆ. ಸಾಮಾನ್ಯವಾಗಿ ಚಿಕ್ಕದಾಗಿ ನಡೆಯುವ ಒಂದು ನಾಮಕರಣ ಸಮಾರಂಭದಲ್ಲಿ ಕನಿಷ್ಠ ೩೦ ಕೆಜಿಯಾದರೂ ಹಂದಿ ಮಾಂಸ ಬಳಸಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹಣವುಳ್ಳವರ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಕ್ವಿಂಟಾಲ್ ಲೆಕ್ಕದಲ್ಲಿ ಹಂದಿ ಮಾಂಸದ ಬಳಕೆ ಆಗುತ್ತದೆ. ಮನೆ ಮನೆಗಳಲ್ಲೂ ಮಾಂಸಾಹಾರ ಎಂದರೆ ಹಂದಿ ಮಾಂಸದ ಉಪಯೋಗ ಇಲ್ಲಿ ಸಾಮಾನ್ಯ. ’ಪಂದಿ ಕರಿ’ ಸವಿಯುವುದಕ್ಕಾಗಿಯೇ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರೂ ಇದ್ದಾರೆ.

ಹಂದಿ ಮಾಂಸಕ್ಕೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಯಷ್ಟು ಪ್ರಮಾಣದಲ್ಲಿ ’ಸರಕು’ ಲಭ್ಯವಿಲ್ಲದ ಕಾರಣ ಮಾಂಸದ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ೩ ವರ್ಷಗಳ ಹಿಂದೆ ಕೆಜಿಗೆ ೧೫೦-೧೬೦ ರೂ. ಆಸುಪಾಸಿನಲ್ಲಿದ್ದ ಹಂದಿ ಮಾಂಸದ ದರ ನಂತರ ಏರುತ್ತಾ ಬಂದು ಕೆ.ಜಿ.ಗೆ ೨೦೦-೨೨೦ರೂ.ಗಳಂತೆ ಸುಮಾರು ಒಂದು ವರ್ಷಗಳ ಕಾಲ ಮಾರಾಟ ಆಗುತ್ತಿತ್ತು. ೨೦೨೩ರ ಕೈಲ್ ಮುಹೂರ್ತ ಹಬ್ಬದ ತನಕ ಕೆ.ಜಿ.ಗೆ ೨೪೦-೨೬೦ ರೂ. ಇತ್ತು. ನಂತರದ ದಿನಗಳಲ್ಲಿ ಹಂದಿ ಮಾಂಸದ ದರ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಕೆಜಿಗೆ ೨೮೦, ೩೦೦, ೩೨೦, ೩೪೦ ರೂ. ಎಂದು ಪ್ರತಿ ತಿಂಗಳು ಏರಿಕೆ ಆಗಿ ಈಗ ಕೆಜಿಗೆ ೩೪೦-೩೫೦ ರೂ. ತನಕ ಮಾರಾಟ ಮಾಡಲಾಗುತ್ತಿದೆ.

ಹಂದಿ ಮಾಂಸದ ಬೆಲೆಯಲ್ಲಿ ಏರಿಕೆ ಆಗುತ್ತಿರುವುದು ಹಂದಿ ಸಾಕಾಣಿಕೆದಾರರಿಗೆ ಖುಷಿ ತಂದಿದೆ. ಸದ್ಯಕ್ಕೆ ವ್ಯಾಪಾರಿಗಳು ಹಂದಿ ಸಾಕಾಣಿಕೆದಾರರಿಂದ ಕೆ.ಜಿ.ಗೆ ೨೭೦-೩೦೦ ರೂ. ಗಳಿಗೆ ಖರೀದಿ ಮಾಡುತ್ತಿದ್ದಾರೆ. ಆದರೆ ಹಂದಿ ಮಾಂಸ ದರದಲ್ಲಿನ ಏರಿಕೆ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಅದರಲ್ಲೂ ಸಮಾರಂಭಗಳಿಗೆ ದೊಡ್ಡ ಪ್ರಮಾಣದಲ್ಲಿ ಖರೀದಿಸುವವರಿಗೆ ಈ ಬೆಲೆ ಏರಿಕೆ ನಿಜಾರ್ಥದಲ್ಲಿ ಶಾಕ್ ಕೊಟ್ಟಿದೆ. ನಿಶ್ಚಿತಾರ್ಥ, ಮದುವೆ, ನಾಮಕರಣ ದಂತಹ ಶುಭ ಸಮಾರಂಭಗಳಿರಲಿ, ತಿಥಿಯೇ ಆಗಲಿ ಹಂದಿ ಮಾಂಸದ ಬಳಕೆ ಅನಿವಾರ್ಯವಾಗಿರುವುದರಿಂದ ಕಾರ್ಯಕ್ರಮದ ಬಜೆಟ್ ಪೈಕಿ ಸಿಂಹಪಾಲು ಹಣ ಹಂದಿ ಮಾಂಸಕ್ಕೆ ತೆಗೆದಿಡಬೇಕಾದ ಸ್ಥಿತಿ ಇದೆ.

ಕೊಡಗಿನಲ್ಲಿ ಮೊದಲೆಲ್ಲಾ ಸಾಮಾನ್ಯವಾಗಿ ಮನೆ ಮನೆಗಳಲ್ಲಿ ಹಂದಿ ಸಾಕಾಣಿಕೆ ನಡೆಯುತ್ತಿತ್ತು. ಒಂದೊಂದು ಮನೆಯಲ್ಲೂ ೨-೩ ಹಂದಿಗಳು ಇರುತ್ತಿದ್ದವು. ದನದ ಕೊಟ್ಟಿಗೆಗಳಂತೆ ಹಂದಿ ಗೂಡುಗಳೂ ಇರುತ್ತಿದ್ದವು. ಹಂದಿಗಳಿಗಾಗಿ ವಿಶೇಷ ಆಹಾರವನ್ನೇನೂ ಕೊಡುತ್ತಿರಲಿಲ್ಲ. ಮನೆಯಲ್ಲಿ ಉಳಿಯುವ ಆಹಾರ ಪದಾರ್ಥಗಳು, ತರಕಾರಿ ತ್ಯಾಜ್ಯ, ಹಾಳಾದ ತರಕಾರಿ, ಭತ್ತದ ಹೊಟ್ಟು, ಪುಡಿ ಅಕ್ಕಿಗಳನ್ನೇ ಕೊಟ್ಟು ಸಾಕಾಣಿಕೆ ಮಾಡಲಾಗುತ್ತಿತ್ತು. ಮನೆಯಲ್ಲಿ ಏನಾದರೂ ಕಾರ್ಯಕ್ರಮಗಳು ನಡೆದರೆ, ಅಥವಾ ಅಕ್ಕಪಕ್ಕದ ಮನೆಯಲ್ಲಿ ಸಮಾರಂಭಗಳಾದರೆ ಈ ಹಂದಿಗಳೇ ಮಾಂಸಕ್ಕೆ ಬಳಕೆ ಆಗುತ್ತಿದ್ದವು. ಏನೂ ಇಲ್ಲದಿದ್ದರೆ ಕೈಲ್‌ಮುಹೂರ್ತ ಹಬ್ಬದ ಸಂದರ್ಭಕ್ಕೆ ಎಂದು ಕೂಡ ಹಂದಿ ಸಾಕಾಣಿಕೆ ನಡೆಯುತ್ತಿತ್ತು.

ಇತ್ತೀಚಿನ ವರ್ಷಗಳ ತನಕವೂ ಗ್ರಾಮೀಣ ಪ್ರದೇಶಗಳಲ್ಲಿ ಸಮಾರಂಭಗಳಿಗೆ ಹಂದಿ ಮಾಂಸವನ್ನು ಹಣ ಖರೀದಿ ಮಾಡುತ್ತಿರಲಿಲ್ಲ. ಮಾಂಸಕ್ಕೆ ಮಾಂಸ ವಿನಿಮಯ ಪದ್ಧತಿ ಜಾರಿಯಲ್ಲಿತ್ತು. ಪಕ್ಕದ ಮನೆ, ಬಂಧು, ಅಥವಾ ಊರಿನವರ ಮನೆಗಳಲ್ಲಿ ನಡೆಯುತ್ತಿದ್ದ ಸಮಾರಂಭಗಳಿಗೆ ಒಂದು ಮನೆಯವರು ತಾವು ಸಾಕಿದ್ದ ಹಂದಿಯ ಮಾಂಸ ಕೊಟ್ಟರೆ, ಅಷ್ಟೇ ಪ್ರಮಾಣದ ಮಾಂಸ ಇವರ ಮನೆಯಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಹಿಂತಿರುಗಿಸಬೇಕಿತ್ತು. ಕೆಲವು ಪ್ರದೇಶಗಳಲ್ಲಿ ಈಗಲೂ ಈ ’ಮಾಂಸ ವಿನಿಮಯ’ ಪದ್ಧತಿ ಕಾಣಬಹುದಾಗಿದೆ.

ಈಗ ಬದಲಾದ ಕಾಲಮಾನದಲ್ಲಿ ಮನೆಗಳಲ್ಲಿ ಹಂದಿ ಸಾಕಾಣಿಕೆ ಮಾಡುವವರ ಸಂಖ್ಯೆ ಇಳಿಮುಖ ಆಗಿದೆ. ಹಂದಿ ಸಾಕಾಣಿಕೆ ವಾಣಿಜ್ಯೀಕರಣ ಆದ ನಂತರ ಮಾರುಕಟ್ಟೆಯಲ್ಲಿ ಸಿಗುವ ಆಹಾರಗಳನ್ನೇ ಹಂದಿಗಳಿಗೆ ನೀಡುವುದರಿಂದ ಹಂದಿ ಸಾಕಾಣಿಕೆ ಲಾಭದಾಯಕ ಅಲ್ಲ ಎನ್ನುವ ಅಭಿಪ್ರಾಯಗಳೂ ಕೇಳಿ ಬರುತ್ತಿದ್ದು, ಇದರಿಂದಲೂ ಬಹುತೇಕರು ಹಂದಿ ಸಾಕಾಣಿಕೆ ಬಿಟ್ಟು ಬೇರೆ ಉದ್ಯೋಗದ ಕಡೆ ಮನಸ್ಸು ಮಾಡಿದ್ದಾರೆ. ಈ ಮಧ್ಯೆ ಹಂದಿ ಮಾಂಸ ಬೇಡಿಕೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದ್ದು, ಸ್ಥಳೀಯವಾಗಿ ಹಂದಿ ಸಾಕುವವರು ಕಡಿಮೆ ಆಗಿರುವುದರಿಂದ ಬೇಡಿಕೆ ಇರುವಷ್ಟು ಮಾಂಸದ ಪೂರೈಕೆ ಇಲ್ಲಿ ಆಗುತ್ತಿರಲಿಲ್ಲ. ಹಾಗಾಗಿ ಬೇರೆ ಕಡೆಗಳಿಂದ ವ್ಯಾಪಾರಿಗಳು ಹಂದಿ ಮಾಂಸ ತರಿಸಿಕೊಳ್ಳುತ್ತಿದ್ದಾರೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾಗದಿಂದ ಕೊಡಗಿಗೆ ದೊಡ್ಡ ಪ್ರಮಾಣದಲ್ಲಿ ಹಂದಿ ಮಾಂಸ ಪೂರೈಕೆ ಆಗುತ್ತಿತ್ತು. ಇತ್ತೀಚೆಗೆ ಕೇರಳದಲ್ಲಿ ಹಂದಿಗಳಿಗೆ ಕಾಯಿಲೆ ಕಂಡು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆಂಧ್ರ ಮತ್ತು ತೆಲಂಗಾಣದ ಹಂದಿ ಸಾಕಾಣಿಕೆದಾರರು ಸಿಕ್ಕಿದ ದರಕ್ಕೆ ತಮ್ಮಲ್ಲಿದ್ದ ಹಂದಿಗಳನ್ನು ಮಾರಾಟ ಮಾಡಿದ್ದರು. ಹೆಚ್ಚು ಬೇಡಿಕೆ ಇರುವ ಈಶಾನ್ಯ ರಾಜ್ಯಗಳಿಗೂ ಕಳುಹಿಸಿ ಕೊಡಲಾಗಿತ್ತು. ಅದರ ಪರಿಣಾಮದ ಈಗ ಕೊಡಗಿಗೂ ತಟ್ಟಿದೆ. ಒಂದು ಕಡೆ ಸ್ಥಳೀಯವಾಗಿ ಹಂದಿ ಮಾಂಸ ಸಿಗುತ್ತಿಲ್ಲ. ಮತ್ತೊಂದು ಕಡೆ ಹೊರ ರಾಜ್ಯದಿಂದಲೂ ಬೇಡಿಕೆಯಷ್ಟು ಪ್ರಮಾಣದಲ್ಲಿ ಹಂದಿ ಮಾಂಸ ಬರುತ್ತಿಲ್ಲ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಹೊರ ರಾಜ್ಯದಿಂದ ಜಿಲ್ಲೆಗೆ ಹಂದಿ ಮಾಂಸ ಪೂರೈಕೆ ಮಾಡುತ್ತಿರುವವರು ಇಲ್ಲಿಯ ವ್ಯಾಪಾರಿಗಳಿಂದ ಕೆ.ಜಿ.ಗೆ ೩೦೦-೩೧೦ ರೂ. ಪಡೆದುಕೊಳ್ಳುತ್ತಿದ್ದಾರೆ. ಇಷ್ಟು ದರ ಕೊಟ್ಟರೂ ಒಮ್ಮೊಮ್ಮೆ ಹಂದಿ ಮಾಂಸ ಸಿಗುವುದಿಲ್ಲ ಎನ್ನುವ ವ್ಯಾಪಾರಿಗಳು ಸಮಾರಂಭಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾಂಸ ಪೂರೈಸಲು ಒಪ್ಪಿಕೊಂಡರೆ ಪೂರೈಕೆದಾರರಿಗೆ ಮೊದಲೇ ಹಣ ಕೊಟ್ಟು ಮಾಂಸ ಬುಕ್ ಮಾಡಿ ಇಟ್ಟುಕೊಳ್ಳಬೇಕಾದ ಸ್ಥಿತಿ ಇದೆ ಎನ್ನುತ್ತಾರೆ. ಈಗಲೇ ಹೀಗಾದರೆ ಮಾರ್ಚ್ ನಂತರ ಮದುವೆ ಸಮಾರಂಭಗಳ ಸಂಖ್ಯೆ ಹೆಚ್ಚಾಗಲಿದ್ದು, ಹಂದಿ ಮಾಂಸಕ್ಕೆ ಸಹಜವಾಗಿ ಬೇಡಿಕೆ ಹೆಚ್ಚಾಗುತ್ತದೆ. ಆಗ ಮಾಂಸದ ದರ ಕೆಜಿಗೆ ೫೦೦ ರೂ. ದಾಡಬಹುದು ಎನ್ನುವುದು ಹಂದಿ ಮಾಂಸ ವ್ಯಾಪಾರಿಗಳ ಅಭಿಪ್ರಾಯ.

ಕೊಡಗಿನಲ್ಲಿ ’ಆಹಾರ ಪ್ರವಾಸೋದ್ಯಮ’ವೂ ಹೆಚ್ಚು ಜನಪ್ರಿಯವಾಗಿದೆ. ಸ್ಥಳೀಯ ವಿಶೇಷ ಆಹಾರದ ರುಚಿ ನೋಡುವುದಕ್ಕಾಗಿಯೇ ಜಿಲ್ಲೆಗೆ ಪ್ರವಾಸ ಹಮ್ಮಿಕೊಳ್ಳುವವರಿದ್ದಾರೆ. ಅದರಲ್ಲೂ ಕೊಡಗು ಶೈಲಿಯ ’ಪಂದಿ ಕರಿ’ಗೆ ಪ್ರವಾಸಿಗರಿಂದ ದೊಡ್ಡ ಮಟ್ಟಿಗೆ ಬೇಡಿಕೆ ಇದೆ. ’ಪಂದಿ ಕರಿ’ ಜತೆಗೆ ಅಕ್ಕಿ ರೊಟ್ಟಿ ಮತ್ತು ಕಡಂಬುಟ್ಟು ಉತ್ತಮ ಕಾಂಬಿನೇಷನ್. ಜಿಲ್ಲೆಯಲ್ಲಿರುವ ಕೊಡಗು ಶೈಲಿಯ ಹೊಟೇಲ್‌ಗಳಿಗೆ ಗೂಗಲ್‌ನಲ್ಲಿ ಸಿಕ್ಕಿರುವ ರೇಟಿಂಗ್ಸ್‌ಗಳಿಂದಲೇ ಇವುಗಳ ಜನಪ್ರಿಯತೆ ಅಳಿಯಬಹುದಾಗಿದೆ. ಹಂದಿ ಮಾಂಸದ ದರ ಹೆಚ್ಚಾಗುತ್ತಿರುವುದರಿಂದ ಕೆಲವು ಹೊಟೇಲ್‌ಗಳಲ್ಲಿ ಈಗಾಗಲೇ ಇವುಗಳಿಂದ ಮಾಡಿರುವ ಖಾದ್ಯಗಳ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಕೆಲವು ಹೊಟೇಲ್‌ಗಳ ಮಾಲೀಕರು ಮಾಂಸದ ಬೆಲೆ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ತಮ್ಮ ದರ ಪಟ್ಟಿ ಬದಲಾಯಿಸಿಲ್ಲ.

ನಮ್ಮಲ್ಲಿ ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ಹಂದಿ ಮಾಂಸದ ಪೂರೈಕೆ ಆಗುತ್ತಿಲ್ಲ. ಪೂರೈಕೆದಾರರ ದರವೇ ಕೆಜಿಗೆ ೩೦೦-೩೧೦ ರೂ. ಇದೆ. ಹಾಗಾಗಿ ನಾವು ಕೂಡ ಮಾರಾಟ ಬೆಲೆಯನ್ನು ಅನಿವಾರ್ಯವಾಗಿ ಹೆಚ್ಚಿಸಬೇಕಿದೆ. ಮೊದಲೆಲ್ಲಾ ಸ್ಥಳೀಯವಾಗಿ ಹಂದಿ ಸಾಕಾಣಿಕೆದಾರರಿಂದ ಮಾಂಸ ಲಭ್ಯ ಆಗುತ್ತಿತ್ತು. ಆದರೆ ಈಗ ಕೊಡಗಿನಲ್ಲಿ ಹಂದಿ ಸಾಕುವವರ ಸಂಖ್ಯೆಯೇ ಕಡಿಮೆ ಆಗಿದೆ. ಇದು ಕೂಡ ಮಾಂಸದ ಬೆಲೆ ಹೆಚ್ಚಾಗಲು ಕಾರಣವಾಗಿದೆ. ಇನ್ನು ಮದುವೆ ಸೀಸನ್ ಶುರುವಾಗುವುದರಿಂದ ಹಂದಿ ಮಾಂಸದ ದರ ಮತ್ತಷ್ಟು ಹೆಚ್ಚು ಆಗಬಹುದು.
ಸುಬ್ರಮಣಿ, ಹಂದಿ ಮಾಂಸ ವ್ಯಾಪಾರಿ, ಸಿದ್ದಾಪುರ

ಹಂದಿಗಳಲ್ಲಿ ಕಾಣಿಸಿಕೊಂಡ ಆಫ್ರಿಕನ್ ಸಾವಿನ್ ಫೀವರ್ ರೋಗದಿಂದಾಗಿ ಹಂದಿಗಳು ಸಾವನ್ನಪ್ಪಿವೆ. ಒಂದು ಹಂದಿಗೆ ಜ್ವರ ಕಾಣಿಸಿಕೊಂಡಲ್ಲಿ ಜೊತೆಯಲ್ಲಿರುವ ಹಂದಿಗಳಿಗೂ ರೋಗ ಬೇಗ ಹರಡುತ್ತದೆ. ಈ ರೋಗದಿಂದಾಗಿ ಕೊಡಗು ಜಿಲ್ಲೆಯ ಬಹುತೇಕ ಹಂದಿ ಸಾಕಾಣಿಕೆಗಾರರು ಬಾರಿ ನಷ್ಟ ಅನುಭವಿಸುತ್ತಿದ್ದಾರೆ. ಬೇಡಿಕೆ ಹೆಚ್ಚು ಇರುವುದರಿಂದ ಕೊಡಗಿನಲ್ಲಿ ಕೆಜಿಗೆ ೩೮೦ ರೂ. ತನಕ ಮಾರಾಟವಾಗುತ್ತಿದೆ.
ಸೋಮಯ್ಯ, ಹಂದಿ ಮಾಂಸ ವ್ಯಾಪಾರಿ, ಮಾಲ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net