ನನ್ನ ಹತ್ಯೆಗೂ ಸ್ಕೆಚ್ ಸಿದ್ಧವಾಗಿತ್ತು...!

9 Dwd 3 (Gurunathgouda Goudar)
Published on

ಧಾರವಾಡ: ಹೆಬ್ಬಳ್ಳಿ ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದ ನಂತರದಲ್ಲಿ, ನ್ಯಾಯಕ್ಕಾಗಿ ಹೋರಾಡುತ್ತಿದ್ದ ನನ್ನ ಹತ್ಯೆಗೂ ಸ್ಕೆಚ್ ಹಾಕಿದ್ದರು....

ಹೀಗೆ ಹೇಳಿದರು ಯೋಗೀಶಗೌಡ ಸಹೋದರ ಗುರುನಾಥ ಗೌಡ. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳನ್ನೇ ದುರ್ಬಳಕೆ ಮಾಡಿಕೊಂಡು ನಕಲಿ ಎನ್​ಕೌಂಟರ್ ಮಾಡಿಸಲು ಮುಂದಾಗಿದ್ದರು ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.

2016ರ ಜೂ. 15ರಂದು ಯೋಗೀಶಗೌಡ ಕೊಲೆಯಾಗಿತ್ತು. ಆತನ ಸಾವಿಗೆ ನ್ಯಾಯ ದೊರಕಿಸಿಕೊಡಲು ನಾನು ಕಾನೂನು ಹೋರಾಟ ನಡೆಸುತ್ತಿದ್ದೆ.

ತಾಲೂಕಿನ ಗೋವನಕೊಪ್ಪದಲ್ಲಿರುವ ಗುರುನಾಥಗೌಡ ತೋಟದ ಮನೆಯ ಮೇಲೆ ಜಿಲ್ಲಾ ಪೊಲೀಸ್ ಅಧಿಕಾರಿಗಳ ತಂಡ ದಾಳಿ ಮಾಡಿತ್ತು. ಅಂದು ತಪ್ಪಿಸಿಕೊಂಡಿದ್ದ ಅವರು ನ್ಯಾಯಾಲಯಕ್ಕೆ ಶರಣಾಗಿದ್ದರು.

ವಿಚಾರಣೆಗೆ ತಾಲೂಕಿನ ಸಿಂಗನಹಳ್ಳಿಗೆ ಕರೆದೊಯ್ದಿದ್ದ ಅಂದಿನ ಡಿವೈಎಸ್​ಪಿ ಚಂದ್ರಶೇಖರ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದಾಗಿ ಒಪ್ಪಿಕೊಳ್ಳಲು ಒತ್ತಾಯಿಸಿದ್ದರು. ಬೆಳಗಾವಿ ಎಸ್​ಪಿ ಕಚೇರಿಯ ಡಿವೈಎಸ್​ಪಿ ತುಳಜಪ್ಪ ಸುಲ್ಪಿಗೆ ಕರೆ ಮಾಡಿ ಒಪ್ಪಿಸುವಂತೆ ಕೇಳಿದ್ದರು. ತಪ್ಪೊಪ್ಪಿಕೊಳ್ಳುವಂತೆ ಸುಲ್ಪಿ ನನ್ನ ಮೇಲೆ ಒತ್ತಡ ಹೇರಿದ್ದರು. ನಂತರ ಸಿಪಿಐ ಪ್ರಶಾಂತ ನಾಯಕ ಹಾಗೂ ಪಿಎಸ್​ಐ ಆನಂದ ಠಕ್ಕಣ್ಣವರ ಮನೆಗೆ ಕರೆದುಕೊಂಡು ಬಂದರು. ಸಿಪಿಐ ಪ್ರಶಾಂತ ನಾಯಕ ಬಣವೆಯಲ್ಲಿ ಮೊದಲೇ ಪಿಸ್ತೂಲ್ ಇಟ್ಟು, ನಾನೇ ಇಟ್ಟಿದ್ದಾಗಿ ಆರೋಪ ಹೊರಿಸಿದರು. ಸುಳ್ಳು ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸಿದೆ ಎಂದು ಗುರುನಾಥಗೌಡ ಹೇಳಿದರು.

ಯೋಗೀಶಗೌಡ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬ ನಮ್ಮ ಅಳಲಿಗೆ ಬಿಜೆಪಿ ಸರ್ಕಾರ ಸ್ಪಂದಿಸಿತು. ಅದಲ್ಲದಿದ್ದರೆ ನ್ಯಾಯ ಸಿಗುವ ನಿರೀಕ್ಷೆಯೇ ಇರುತ್ತಿರಲಿಲ್ಲ ಎಂದು ಅವರು ನಿಟ್ಟುಸಿರು ಬಿಟ್ಟರು.

2017ರಲ್ಲಿ ಬಸವರಾಜ ಕೊರವರ ಹಾಗೂ ನನ್ನ ಹತ್ಯೆಗೆ ಸಂಚು ರೂಪಿಸಲಾಗಿತ್ತು. ನನ್ನನ್ನು ಪೊಲೀಸ್ ಎನ್​ಕೌಂಟರ್​ನಲ್ಲಿ ಹತ್ಯೆಗೈಯಲು ಯತ್ನಿಸಲಾಗಿತ್ತು. ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಆರೋಪದಡಿ ನಾನು ಸೆರೆ ಸಿಕ್ಕಿದ್ದರೆ ಎನ್​ಕೌಂಟರ್ ಮಾಡುತ್ತಿದ್ದರು.| ಗುರುನಾಥಗೌಡ ಗೌಡರ, ಯೋಗೀಶಗೌಡ ಸಹೋದರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net