

ಮೈಸೂರು: ಇಂದಿನ ದಿನಮಾನದಲ್ಲಿ ಎದುರಾಗಿ ಬರುವ ಪರಿಸ್ಥಿತಿಯನ್ನು ಸಮಚಿತ್ತತೆಯಿಂದ ಸ್ವೀಕರಿಸಲು ಸೋಲುತ್ತಿದ್ದೇವೆ ಎಂದು ವಿಶ್ರಾಂತ ಕುಲಪತಿ ಡಾ.ಸಬಿಹಾ ಭೂಮಿಗೌಡ ಬೇಸರ ವ್ಯಕ್ತಪಡಿಸಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಸ್ಮಯ ಪ್ರಕಾಶನದಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಯುಗಾದಿ ಕವಿ- ಕಾವ್ಯ ಸಂಭ್ರಮ ರಾಜ್ಯಮಟ್ಟದ ಕವಿಮೇಳ, ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು
ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಬ್ಬರಲ್ಲೂ ಜೀವಪರವಾಗಿ ಬದುಕುವ ಮನಸ್ಥಿತಿಯು ಬರಬೇಕಾಗಿದೆ. ಈಗಂತೂ ಎಲ್ಲವನ್ನೂ ಸಮಚಿತ್ತತೆಯಿಂದ ಸ್ವೀಕರಿಸುವ ಮನೋಭಾವ ಕ್ಷೀಣಿಸುತ್ತಿದೆ ಎಂದರು.
ಮನಸ್ಸುಗಳು ಸದೃಢವಾಗುವ ಬದಲು ದುರ್ಬಲವಾಗುತ್ತಿವೆ. ಬದುಕಿಗೆ ಬೆನ್ನು ತಿರುಗಿಸುವುದನ್ನು ನೋಡಿದರೆ ಗ್ರಹಿಸುವ ಕ್ರಮದಲ್ಲಿ ತಪ್ಪಿದೆ ಎನಿಸುತ್ತಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನು ಒಪ್ಪದ ಮನಸ್ಥಿತಿ ಕ್ರೂರವಾದುದು, ಅಮಾನವೀಯವಾದುದು. ಮನಸ್ಸುಗಳು ಬೇರೆ ಬೇರೆಯಾಗುವ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರುವುದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿ ಮೂರು ಸಂಘಟನೆಗಳು ಸೇರಿ ವಿಭಿನ್ನ ಮನಸ್ಸುಗಳನ್ನು ಒಂದೆಡೆ ಸೇರಿಸಿ, ಸಂಬಂಧವನ್ನು ಗಟ್ಟಿಗೊಳಿಸುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದು ಅವರು ಶ್ಲಾಘಿಸಿದರು.
ಕಾವ್ಯ ಜಗತ್ತಿಗೆ ವಿಮರ್ಶೆಯ ಪ್ರಜ್ಞೆ ತರಬೇಕು. ಈಗ ಕೇವಲ ಕವಿತೆ ಓದಲಾಗುತ್ತದೆ. ಆದರೆ ಕೇಳುವ ವ್ಯವಧಾನ ಇಲ್ಲ. ಬೇರೆಯವರು ಓದುವುದನ್ನು ಕೇಳುವ ಮನಸ್ಥಿತಿಯೂ ಬರಬೇಕು. ಜತೆಗೆ ಬೇರೆಯವರು ಬರೆದಿದನ್ನು ಓದುವ ಕಾರ್ಯಕ್ರಮಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಕೆಡಕು ಬಯಸುವವರಿಗೂ ಒಳಿತು ಬಯಸುವವನೇ ನೈಜ ಕವಿ. ಎಲ್ಲರ ಮನಸ್ಸಿನಲ್ಲಿಯೂ ಕವಿ ಇರಲಿ. ಕವಿತೆ ಮನಸ್ಸಿನ ಪ್ರತಿಫಲನವಾಗಿರುತ್ತದೆ. ಕವಿತೆಯಲ್ಲಿ ಕವಿಯ ವ್ಯಕ್ತಿತ್ವ ಪ್ರಕಟವಾಗುತ್ತದೆ ಎಂದರು.
ನಾವೆಲ್ಲ ಪ್ರಕೃತಿಯ ಬಾಡಿಗೆದಾರರೇ ಹೊರತು ವಾರಸುದಾರರಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯುಗಾದಿ ಹಬ್ಬ ಮುಗಿದಿದೆ. ಆದರೆ ಇಲ್ಲಿ ಸಾಹಿತ್ಯ ಯುಗಾದಿ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹಿರಿಯ ಕವಯಿತ್ರಿ ಡಾ.ಲತಾ ರಾಜಶೇಖರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಇಡೀ ದೇಶಕ್ಕೆ ಮಾದರಿಯಾದವರು. ರಾಜ್ಯದಲ್ಲಿ ಹಲವು ಪ್ರಥಮಗಳಿಗೆ ಕಾರಣರಾದವರು ಎಂದು ಬಣ್ಣಿಸಿದರು.
ನಾಲ್ವಡಿ ಅವರ ಕಾಲದಲ್ಲಿಯೇ ಮೀಸಲಾತಿ ನೀಡಲಾಗಿತ್ತು. ಏಷ್ಯಾದಲ್ಲಿಯೇ ಪ್ರಥಮವಾಗಿ ವಿದ್ಯುತ್ ಸಂಪರ್ಕ ಸೇರಿದಂತೆ ಕೃಷಿ, ಕೈಗಾರಿಕೆ, ಆರೋಗ್ಯ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸಲಾಯಿತು ಎಂದು ಸ್ಮರಿಸಿದರು.
ವಿವಿಧ ಕ್ಷೇತ್ರದವರಿಗೆ ಪ್ರಶಸ್ತಿ ಪ್ರದಾನ:
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕನ್ನಡ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ, ಎಂ.ಸಿ. ಚೋಂದಮ್ಮ, ಪಿ. ಜಯಚಂದ್ರ ರಾಜು, ಎಲ್.ಪುರುಷೋತ್ತಮ, ರಜನಿರಾಜ್ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ, ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಉಪಾಧ್ಯಕ್ಷ ಕೆ.ಎಸ್.ಸತೀಶ್ ಕುಮಾರ್, ಕಾರ್ಯದರ್ಶಿ ಡಾ.ಬಿ.ಬಸವರಾಜು, ಸಂಚಾಲಕ ಹಾಲತಿ ಲೋಕೇಶ್, ಸಂಘಟಕರಾದ ಟಿ.ಲೋಕೇಶ್, ಸಾಲುಂಡಿ ಸಿ.ಬಸಪ್ಪ, ಚಂದ್ರು ಮಂಡ್ಯ, ನಾ.ಗಂಗಾಧರಪ್ಪ, ಬನ್ನಂಗಾಡಿ ಸಿದ್ದಲಿಂಗಯ್ಯ ಇತರರು ಇದ್ದರು.