ಹಳ್ಳಿ ಕಡೆಗೆ ಸಂಚರಿಸದ ಸಾರಿಗೆ

19 lxr 1
Published on

ಲಕ್ಷೆ್ಮೕಶ್ವರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಬಸ್​ಗಾಗಿ ತಾಸುಗಟ್ಟಲೆ ಕಾಯುವ ಮತ್ತು ಬಂದ ಬಸ್ ಹತ್ತಲು ಮುಗಿಬೀಳುವ ದೃಶ್ಯ ಸಾಮಾನ್ಯವಾಗಿದೆ.

ಕರೊನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ವಸ್ತಿ ಬಸ್​ಗಳು ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಬೆಳಗಿನ ವೇಳೆ ಬಸ್​ಗಳೂ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಗ್ರಾಮೀಣ ವಿದ್ಯಾರ್ಥಿಗಳು ಲಭ್ಯವಿರುವ ಟಂಟಂ, ಲಾರಿ, ಟಿಪ್ಪರ್, ಟ್ರ್ಯಾಕ್ಟರ್​ಗಳನ್ನೇರಿ ಪಟ್ಟಣದ ಶಾಲೆ-ಕಾಲೇಜಿಗೆ ಬರುವಂತಾಗಿದೆ.

ಇನ್ನು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ನೂರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ವೈದ್ಯಕೀಯ, ಡಿಪ್ಲೊಮಾ, ಎಲ್​ಎಲ್​ಬಿ ಸೇರಿ ಇತರ ವೃತ್ತಿ ಆಧಾರಿತ ಶಿಕ್ಷಣಕ್ಕಾಗಿ ಗದಗ, ಹುಬ್ಬಳ್ಳಿಗೆ ಹೋಗುತ್ತಾರೆ. ಆದರೆ, ಬೆಳಗಿನ ವೇಳೆ ಬಸ್​ಗಳ ಕೊರತೆ ಮತ್ತು ಸರಿಯಾದ ವೇಳೆಗೆ ಬಾರದ್ದರಿಂದ ಸಕಾಲಕ್ಕೆ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಶಾಲೆ- ಕಾಲೇಜ್ ಮುಗಿಸಿ ಸ್ವಗ್ರಾಮಕ್ಕೆ ಮರಳಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ವಣವಾಗಿದೆ.

ಇದಲ್ಲದೆ ನೌಕರರು, ವ್ಯಾಪಾರಸ್ಥರು, ಪ್ರಯಾಣಿಕರು ಬಸ್​ಗಾಗಿ ಕಾಯುವ ಮತ್ತು ತಾಸಿಗೊಮ್ಮೆ ಬರುವ ಬಸ್ ಹತ್ತಲು ಪರದಾಡುತ್ತಿದ್ದಾರೆ. ಪ್ರಯಾಣಿಕರ ದಟ್ಟಣೆಯಿಂದ ಮಹಿಳೆಯರು, ಮಕ್ಕಳು, ವೃದ್ಧರು ಬಸ್​ನಲ್ಲಿ ಪ್ರಯಾಣಿಸಲು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ಕಿಸೆಗಳ್ಳರು, ಸರಗಳ್ಳರು ತಮ್ಮ ಕೈ ಚಳಕ ತೋರಿಸುತ್ತಿರುವ ಪ್ರಕರಣಗಳೂ ನಡೆಯುತ್ತಿವೆ.

ಕರೊನಾ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾಲೇಜ್ ಬಂದ್ ಆಗಿ ಶಿಕ್ಷಣದಿಂದ ವಂಚಿತರಾಗಿದ್ದೇವೆ. ಈಗ ಮತ್ತೆ ಕಾಲೇಜ್ ಪ್ರಾರಂಭವಾಗಿದ್ದು ಹೆಚ್ಚುವರಿ ತರಗತಿ ನಡೆಯುತ್ತಿವೆ. ಶಾಲೆಗೆ ಬೇಗ ಹೋಗಬೇಕು. ಆದರೆ, ಸರಿಯಾಗಿ ಬಸ್ ಸೌಲಭ್ಯ ಇಲ್ಲದ್ದರಿಂದ ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಶಾಲೆಯ ಸಮಯಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು.| ಲಕ್ಷ್ಮೀ ಪಾಟೀಲ, ನವೀನ ಮೆಣಸಿನಕಾಯಿ ವಿದ್ಯಾರ್ಥಿಗಳು, ಲಕ್ಷೆ್ಮೕಶ್ವರಬೆಳಗಿನ ವೇಳೆ ಗದಗ ಭಾಗಕ್ಕೆ ನಾಲ್ಕಾರು ಮತ್ತು ಹುಬ್ಬಳ್ಳಿ ಭಾಗಕ್ಕೆ ಏಳೆಂಟು ಬಸ್ ಸೌಲಭ್ಯವಿದೆ. ಲಕ್ಷೆ್ಮೕಶ್ವರ ಘಟಕದಿಂದ ನಿತ್ಯ 70 ಶೆಡ್ಯೂಲ್ ಓಡಿಸಲಾಗುತ್ತಿದೆ. ಲಕ್ಷೆ್ಮೕಶ್ವರ ಘಟಕದಿಂದ ನಿವೃತ್ತಿ, ವರ್ಗಾವಣೆ ವಿವಿಧ ಕಾರಣಗಳಿಂದ ಚಾಲಕ- ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿ ಒಟ್ಟು 25ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದೆ. ಸದ್ಯ ರೈಲ್ವೆ ಸಾರಿಗೆ ಬಂದ್ ಆಗಿದ್ದರಿಂದ ಎಲ್ಲರೂ ಬಸ್​ಗಳನ್ನೇ ಅವಲಂಬಿಸುವಂತಾಗಿದೆ. ಆದಾಗ್ಯೂ ಇದ್ದ ವ್ಯವಸ್ಥೆಯಲ್ಲಿಯೇ ಸಮಸ್ಯೆಗೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.| ಶೇಖರ ನಾಯ್ಕ ವ್ಯವಸ್ಥಾಪಕ ಲಕ್ಷೆ್ಮೕಶ್ವರ ಸಾರಿಗೆ ಘಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net