The situation of nomads is dire!

The situation of nomads is dire!
ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿ.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಕಾರ್ಮಿಕ, ಪ್ರವಾಸೋದ್ಯಮ ಇಲಾಖೆ ಹಗರಣಗಳು ಬಹಿರಂಗಗೊಂಡ ಬೆನ್ನಲ್ಲೇ ನಿಗಮವೊಂದರಲ್ಲಿರುವ ಅನುದಾನವನ್ನು ಫಲಾನುಭವಿಗಳಿಗೆ ಹಂಚದೆ ಆ ಹಣವನ್ನು ಕಾರ್ಮಿಕ ಇಲಾಖೆ ಮಾದರಿಯಲ್ಲಿ ಲೂಟಿ ಹೊಡೆಯುವ ಸಂಚು ನಡೆದಿದೆಯಾ ಎನ್ನುವ ಅನುಮಾನ ಉಂಟಾಗಿದೆ.

ರಾಜ್ಯ ಸರ್ಕಾರ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಜಿಲ್ಲೆಗೆ 1.37 ಕೋಟಿ ರೂ. ಹಂಚಿಕೆ ಮಾಡಿದೆ. ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಈ ಅನುದಾನವನ್ನು ಫಲಾನುಭವಿಗಳಿಗೆ ವಿತರಿಸಲು ಪಟ್ಟಿ ಅಂತಿಮಗೊಂಡು 11 ತಿಂಗಳಾದರೂ ಅಧಿಕಾರಿಗಳು ಮುದ್ರೆ ಹಾಕದಿರುವುದು ಸಂದೇಹ ಮೂಡಿಸಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡದೆ ಗುತ್ತಿಗೆ ನೌಕರನೊಬ್ಬ ತನ್ನ ಪರಿಚಯಸ್ಥರ ಖಾತೆಗಳಿಗೆ ವರ್ಗಾವಣೆ ಮಾಡಿ ಕಾರ್ಮಿಕ ಇಲಾಖೆಯ ಕೋಟ್ಯಂತರ ರೂ. ಲಪಟಾಯಿಸಿರುವ ಮಾದರಿಯಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ಹಣವನ್ನು ಕೊಳ್ಳೆ ಹೊಡೆಯುವ ಪ್ರಯತ್ನ ಏನಾದರೂ ನಿಗಮದ ಅನುದಾನ ಬಿಡುಗಡೆ ವಿಳಂಬದ ಹಿಂದೆ ಅಡಗಿದೆಯಾ ಎಂಬ ಆತಂಕ ಈಗ ಕಾಡುತ್ತಿದೆ.

ಖಜಾನೆಯಲ್ಲಿ ಕೊಳೆಯುತ್ತಿದೆ ಹಣ?

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮವು ತಳ ಸಮುದಾಯ ಆರ್ಥಿಕ, ಸಾಮಾಜಿಕ ಬೆಳವಣಿಗೆ ಉದ್ದೇಶದಿಂದ ನೇರ ಸಾಲ, ಉದ್ಯೋಗ, ಟ್ಯಾಕ್ಸಿ ಯೋಜನೆ, ಬೈಕ್, ಮಹಿಳಾ ಸಂಘಗಳಿಗೆ ಭೌತಿಕ, ಆರ್ಥಿಕ ಪ್ರಗತಿಗಾಗಿ 2023 ಸೆಪ್ಟೆಂಬರ್ 1 ರಂದು 1,37,90,000 ರೂ. ಬಿಡುಗಡೆಗೊಳಿಸಿದೆ. ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ಖಾತೆಗೆ ಹಣ ಜಮೆಯಾಗಿದೆ. ನಿಗಮದ ಜಿಲ್ಲಾ ಆಯ್ಕೆ ಸಮಿತಿ 2023 ಸೆಪ್ಟೆಂಬರ್ 3 ರಂದು ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿ ನೀಡಿದೆ. ಇಲ್ಲಿವರೆಗೆ ಫಲಾನುಭವಿಗಳಿಗೆ ಅನುದಾನ ತಲುಪಿಲ್ಲ. ಖಜಾನೆಯಲ್ಲೇ ಕಾಂಚಾನ ಕೊಳೆಯುತ್ತಿದೆ. ನಿಗಮದಲ್ಲಿರುವ ಹಣದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ ಅವರನ್ನು ವಿಚಾರಿಸಿದಾಗ ನಾನು ಒಂದು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿರುವೆ. ಈಗಾಗಲೇ ಅಂತಿಮ ಹಂತದಲ್ಲಿರುವ ಫಲಾನುಭವಿಗಳ ಪಟ್ಟಿ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಹಣ ಬಿಡುಗಡೆಗೆ ಕ್ರಮ ವಹಿಸುವುದಾಗಿ ಪತ್ರಿಕೆಗೆ ತಿಳಿಸಿದರು.\

ಫಲಾನುಭವಿಗಳ ಆಕ್ರೋಶ

ಸ್ವಯಂ ಉದ್ಯೋಗ 54, ಉದ್ಯಮಶೀಲತಾ 14, ಮೈಕ್ರೋ ಕ್ರೆಡಿಟ್ 5 ಸೇರಿ ಒಟ್ಟು ಐದು ಯೋಜನೆಯ 105 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಹಲವು ತಿಂಗಳಿನಿಂದ ಸಮಾಜ ಇಲಾಖೆ, ಜಿಲ್ಲಾಧಿಕಾರಿ ಕಚೇರಿಗೆ ಫಲಾನುಭವಿಗಳು ನಿತ್ಯ ಅಲೆದಾಡುತ್ತಿದ್ದಾರೆ. ಆದರೆ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಈ ಬಗ್ಗೆ ಗಮನ ಹರಿಸಿಲ್ಲ. ಇಂದು, ನಾಳೆ ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಡೆಗೆ ಫಲಾನುಭವಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಕಾರ್ಮಿಕ ಇಲಾಖೆ ಹಗರಣದ ವರದಿ ವಿಜಯವಾಣಿಯಲ್ಲಿ ಪ್ರಕಟಗೊಂಡಿದ್ದನ್ನು ಗಮನಿಸಿರುವ ಫಲಾನುಭವಿಗಳು, ನಮ್ಮ ಹಣಕ್ಕೂ ಕಳ್ಳಕಾಕರು ಕನ್ನ ಹಾಕಿದ್ದಾರೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಕೆ

ಪರಿಶಿಷ್ಟ ಜಾತಿ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಜನಾಂಗಗಳಾದ ಭಂಗಿ, ಬ್ಯಾಗಾರ, ಚನ್ನ ದಾಸರ, ಕೊರಮ, ಸುಡಗಾಡ ಸಿದ್ದ, ಸಿಳ್ಳಿಕ್ಯಾತರ, ಡಕ್ಕಲಿಗ, ಡೊಂಬರ್, ಬುಡ್ಗ ಜಂಗಮ, ಹೂಳಿ ದಾಸರ, ಘಂಟಿ ಚೋರ ಜನಾಂಗಗಳಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ ಅನುದಾನ ನೀಡಲಾಗಿದೆ. ಅಧಿಕಾರಿಗಳ ನಿಷ್ಕಾಳಜಿಯಿಂದ ಅನುದಾನ ಬಳಕೆಯಾಗುತ್ತಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಜಿಲ್ಲೆಯ ಅಲೆಮಾರಿ ಜನಾಂಗದವರು ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ.

ಅಲೆಮಾರಿ ಅಭಿವೃದ್ಧಿ ನಿಗಮದ ಫಲಾನುಭವಿಗಳ ಪಟ್ಟಿ ಬಗ್ಗೆ ನನ್ನ ಗಮನಕ್ಕಿಲ್ಲ. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ ಅವರಿಂದ ಮಾಹಿತಿ ಪಡೆದು ಕ್ರಮ ವಹಿಸುತ್ತೇನೆ.
ಜಾನಕಿ ಕೆ.ಎಂ. ಜಿಲ್ಲಾಧಿಕಾರಿ, ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net