ಹಾಲಿ ಸಂಸದರು ಟೀಕೆಗೆ ಮಾತ್ರ ಸೀಮಿತ

20 ckm 2
ಚಿಕ್ಕಮಗಳೂರಿನ ಮರ್ಲೆ ಗ್ರಾಮದಲ್ಲಿ ಜಯಪ್ರಕಾಶ್ ಹೆಗ್ಡೆ ಮತಯಾಚನೆ ಮಾಡಿದರು. ಶಾಸಕಿ ನಯನಾ ಮೋಟಮ್ಮ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಸದಸ್ಯ ಕೆ.ವಿ.ಮಂಜುನಾಥ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಅಭಿವೃದ್ಧಿ ಮೊಟಕುಗೊಳಿಸಿ ಟೀಕಾ ಪ್ರಹಾರಕ್ಕೆ ಮಾತ್ರ ಹಾಲಿ ಸಂಸದರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಇದರಿಂದ ಕ್ಷೇತ್ರವು ಹಲವಾರು ಸಮಸ್ಯೆಗಳಿಗೆ ಸಿಲುಕಿಕೊಂಡಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಆರೋಪಿಸಿದರು.
ತಾಲೂಕಿನ ಹರಿಹರದಹಳ್ಳಿ, ಮರ್ಲೆ ಹಾಗೂ ಮುಗುಳುವಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಬಡವರು, ರೈತರು, ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸದೇ ಪ್ರಚೋದನಕಾರಿ ಹೇಳಿಕೆ ನೀಡುವುದೇ ಹಾಲಿ ಸಂಸದರ ಕಾಯಕವಾಗಿದೆ ಎಂದು ದೂರಿದರು.
ದಶಕಗಳಿಂದ ಬಿಜೆಪಿಯ ಕೇಂದ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಈ ಭಾಗಕ್ಕೆ ಸಂಸದರ ನಿಧಿಯಿಂದ ಹಣ ಬಿಡುಗಡೆಗೊಳಿಸಿಲ್ಲ. ಚುನಾವಣೆ ವೇಳೆ ಮಾತ್ರ ನಾಯಕರ ಹೆಸರಿನಲ್ಲಿ ಮತಗಳಿಸುವ ಬಿಜೆಪಿ ಮುಖಂಡರು ನಂತರ ಏಕೆ ಕೆಲಸ ಮಾಡಬೇಕು ಎಂಬ ಮನಸ್ಥಿತಿಯಲ್ಲಿದ್ದಾರೆ ಎಂದು ಟೀಕಿಸಿದರು.
ರಾಜ್ಯಸರ್ಕಾರ ಪಂಚ ಗ್ಯಾರಂಟಿ ಅನುಷ್ಟಾನಗೊಳಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಜೀವಿಸಲು ಅವಕಾಶ ಮಾಡಿಕೊಟ್ಟಿದೆ. ಇವುಗಳನ್ನು ಬಿಟ್ಟಿ ಭಾಗ್ಯವೆಂದು ಟೀಕಿಸುವ ಬಿಜೆಪಿ ಮುಖಂಡರು ಕೇಂದ್ರದಿಂದ ರಾಜ್ಯಕ್ಕೆ ನೀಡಿರುವ ಶಾಶ್ವತ ಕೊಡುಗೆಗಳು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಕ್ಷೇತ್ರದ ಜನತೆಗೆ ಸುಳ್ಳು ಭರವಸೆ ನೀಡುವ ಪಕ್ಷಕ್ಕೆ ಅಧಿಕಾರ ನೀಡಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದರು.
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಡಿ.ಸಿ.ಶ್ರೀಕಂಠಪ್ಪ, ಸದಾನಂದ ಗೌಡ ಹಾಗೂ ಶೋಭಾ ಕರಂದ್ಲಾಜೆ ಮೂವರು 28 ವರ್ಷಗಳಿಂದ ಅಧಿಕಾರ ನಡೆಸಿದರೂ ಶಾಶ್ವತ ಕಾಮಗಾರಿಗಳು ಕೈಗೊಂಡಿಲ್ಲ. ರಾಜ್ಯ ಸರ್ಕಾರ ಬಡವರ ಜೀವನ ಸುಧಾರಣೆಗಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಬೆನ್ನುಲುಬಾಗಿ ನಿಂತಿದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬಿಜೆಪಿಯ ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾ ಪೈಸೆ ಅನುದಾನ ಒದಗಿಸಿಲ್ಲ. ಭೀಕರ ಬರಗಾಲದಲ್ಲಿ ರೈತರು ಹಾಗೂ ಬೆಳೆಗಾರರಿಗೆ ಪರಿಹಾರ ಒದಗಿಸದೇ ಕಂಗಾಲಾಗಿಸಿದೆ. ಇವರಿಗೆ ಮತಕೇಳುವ ನೈತಿಕತೆಯಿಲ್ಲ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಗ್ರಾಪಂ ಸದಸ್ಯ ಮುಳ್ಳೇಗೌಡ, ಮುಖಂಡರಾದ ಕೆ.ಎಸ್.ಶಾಂತೇಗೌಡ, ಕೆಂಚೇಗೌಡ, ಕುಮಾರ್, ಜಯಮ್ಮ ಕೆಂಚೇಗೌಡ, ವೇಣುಗೋಪಾಲ್, ಬಸವರಾಜ್, ಚಂದ್ರಪ್ಪ, ಲಕ್ಷ್ಮಣಗೌಡ, ಮರಿಯಪ್ಪ, ಲಲಿತಮ್ಮ, ರುದ್ರಯ್ಯ, ನಾಗರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net