

ಎಚ್.ಡಿ.ಕೋಟೆ: ಜಮೀನಿಗೆ ಓಡಾಡಲು ರಸ್ತೆ ಕಲ್ಪಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ವಿರುದ್ಧ ತಾಲೂಕಿನ ವಡ್ಡರಗುಡಿ ಗ್ರಾಮದ ರೈತ ಉಮೇಶ್ ತನ್ನ ಕುಟುಂಬದೊಂದಿಗೆ ಪಟ್ಟಣದ ತಾಲೂಕು ಆಡಳಿತ ಭವನದ ಮುಂಭಾಗ ಕೈಗೊಂಡ ಧರಣಿ ಐದನೇ ದಿನವಾದ ಸೋಮವಾರವೂ ಮುಂದುವರಿಯಿತು.
ಧರಣಿನಿರತ ಉಮೇಶ್ ಮಾತನಾಡಿ, ಎಚ್.ಡಿ.ಕೋಟೆ ತಾಲೂಕು ಕಸಬಾ ಹೋಬಳಿ ವಡ್ಡರಗುಡಿ ಗ್ರಾಮ ಸರ್ವೇ ನಂ.17ರಲ್ಲಿ ನಮ್ಮ ಅಜ್ಜಿ ವೆಂಕಟಮ್ಮ ಕೋಂ ವೆಂಕಟೇಶಯ್ಯ ಅವರ ಹೆಸರಿಗೆ 4 ಎಕರೆ ಜಮೀನು ಮಂಜೂರಾಗಿದ್ದು, ಜಮೀನಿಗೆ ರಸ್ತೆ ಇಲ್ಲದೆ ಹಲವು ವರ್ಷಗಳಿಂದ ವ್ಯವಸಾಯ ಮಾಡಲು ತೊಂದರೆ ಆಗಿದೆ.
ಜಮೀನಿಗೆ ರಸ್ತೆ ಕಲ್ಪಿಸುವಂತೆ ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ವರ್ಷದ ಹಿಂದೆ ಅರ್ಜಿ ನೀಡಿ ಮನವಿ ಮಡಿದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಜಮೀನನ್ನು ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಸ್ಥಳಕ್ಕೆ ಹುಣಸೂರು ಉಪವಿಭಾಗಾಧಿಕಾರಿ ಬರಬೇಕು. ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಶ್ರೀನಿವಾಸ್ ತಮ್ಮ ಕಂದಾಯ ಅಧಿಕಾರಿಗಳ ಜತೆ ಆಗಮಿಸಿ ಸಮಸ್ಯೆ ಆಲಿಸಿದರಲ್ಲದೆ, ನ.27ರಂದು ಸಮಸ್ಯೆ ಬಗೆರಿಸಲಾಗುವುದು. ಧರಣಿ ಕೈಬಿಡಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಮೇಶ, ನನ್ನ ಜಮೀನಿಗೆ ರಸ್ತೆ ತೋರಿಸಿದ ನಂತರವೇ ಧರಣಿ ಕೈಬಿಡುತ್ತೇನೆ. ಅಲ್ಲಿಯವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ರೈತನ ಏಕಾಂಗಿ ಹೋರಾಟಕ್ಕೆ ತಾಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಧರಣಿಯಲ್ಲಿ ದಸಂಸ ತಾಲೂಕು ಸಂಚಾಲಕ ಸಣ್ಣಕುಮಾರ್ರ್, ಕಾಳಪ್ಪಾಜಿ, ಸಮೀರ್, ಸತ್ತರ್ ಪಾಷ, ಮಹಾಲಿಂಗಯ್ಯ, ರವಿ ಇದ್ದರು.