ಮಗು ನೋಡಲು ಬಂದ ತಂದೆಯ ಹತ್ಯೆಗೆ ಮುಹೂರ್ತ ಇಟ್ಟ ಪಾಪಿಗಳು...

h25-arrest
Published on

ಹುಬ್ಬಳ್ಳಿ: ತಾಲೂಕಿನ ಅಂಚಟಗೇರಿಯ ಚನ್ನಾಪುರ ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣವನ್ನು 24 ಗಂಟೆಯಲ್ಲಿ ಬೇಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾನಗಲ್ಲಿನ ಜಗದೀಶ ಕೊಲ್ಲೂರ ಎಂಬಾತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಜಗದೀಶನ ಪತ್ನಿ ಅಕ್ಷತಾ ಹಾಗೂ ಆಕೆಯ ಪ್ರಿಯಕರ ಕಾಶಪ್ಪ ನಿಂಗಪ್ಪ ತಿಪ್ಪಣ್ಣವರ ಸಂಚು ನಡೆಸಿ ಕೊಲೆ ಮಾಡಿರುವುದನ್ನು ಖಚಿತಪಡಿಸಿಕೊಂಡು, ಬಂಧಿಸಿದ್ದಾರೆ.

ಅಕ್ಷತಾಗೆ ನಾಲ್ಕು ತಿಂಗಳ ಮಗುವಿದೆ. ತವರಿನಲ್ಲಿರುವ ಬಾಣಂತಿ ಪತ್ನಿ ಹಾಗೂ ತನ್ನ ಕರುಳ ಕುಡಿಯನ್ನು ನೋಡಲು ಬಂದಿದ್ದ ಜಗದೀಶ, ಹೊರಗಡೆ ಹೋದವನು ಕೊಲೆಯಾಗಿದ್ದ.

ಬಾದಾಮಿ ಮೂಲದವನಾಗಿದ್ದು ಅಂಚಟಗೇರಿ ಭಾಗದಲ್ಲಿ ಹೆಸ್ಕಾಂ ಲೈನ್​ವುನ್ ಆಗಿರುವ ಕಾಶಪ್ಪ ತಿಪ್ಪಣ್ಣವರ, ಅಕ್ಷತಾ ಜತೆ ಅನೈತಿಕ ಸಂಬಂಧ ಹೊಂದಿದ್ದ. ಅಕ್ಷತಾಳ ಕುಮ್ಮಕ್ಕಿನ ಮೇರೆಗೆ ಸಂಚು ನಡೆಸಿ, ಜಗದೀಶನನ್ನು ಕರೆದೊಯ್ದು ಮದ್ಯ ಕುಡಿಸಿ, ಕಲ್ಲಿನಿಂದ ತಲೆ ಜಜ್ಜಿ ಸಾಯಿಸಿದ್ದ ಎಂದು ಎಸ್​ಪಿ ಕೃಷ್ಣಕಾಂತ ಅವರು ಬುಧವಾರ ಗ್ರಾಮೀಣ ಠಾಣೆಯಲ್ಲಿ ಮಾಹಿತಿ ನೀಡಿದರು. ಡಿವೈಎಸ್​ಪಿ ರವಿ ನಾಯ್ಕ, ಇನ್ಸ್​ಪೆಕ್ಟರ್ ರಮೇಶ ಗೋಕಾಕ, ಪಿಎಸ್​ಐ ಮಂಜುಳಾ ಸದಾರಿಯವರ, ಡಿ. ಚಾಮುಂಡೇಶ್ವರಿ ನೇತೃತ್ವದ ತಂಡ ತನಿಖೆ ನಡೆಸಿತ್ತು. ಸಿಬ್ಬಂದಿ ನಾರಾಯಣ ಹಿರೇಹೊಳಿ, ಮಂಜು ಹೆಳವರ, ಅರ್ಜುನ ತಕಾಯಿ, ಮಂಜು ಅಮ್ಮಿನಭಾವಿ, ಚಂದ್ರು ಜನಗಣ್ಣವರ, ಮಂಜು ವಾಲಿಕಾರ, ತಾಂತ್ರಿಕ ಸಿಬ್ಬಂದಿ ಎ.ಎಂ. ನವಲೂರ, ಅರೀಫ ಗೋಲಂದಾಜ ಮತ್ತು ಮಳಗಿ ತಂಡದಲ್ಲಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ತಂಡಕ್ಕೆ ಎಸ್​ಪಿ ಬಹುಮಾನ ಘೊಷಿಸಿದ್ದಾರೆ.

4 ತಿಂಗಳ ಶಿಶು ಅನಾಥ: ಅಕ್ಷತಾಳಿಗೆ ನಾಲ್ಕು ತಿಂಗಳ ಮಗು ಇದೆ. ತಂದೆಯ ಹತ್ಯೆಯಾದರೆ, ಆರೋಪಿ ತಾಯಿ ಬಂಧಿಸಲ್ಪಟ್ಟಿದ್ದಾಳೆ. ಪೋಷಕರು ಆ ಮಗುವನ್ನು ನಿಸರ್ಗ ನ್ಯಾಯದಂತೆ (ತಾಯಿಯ ಸಾಮೀಪ್ಯ ಒದಗಿಸಲು) ಪೊಲೀಸ್ ಠಾಣೆಗೂ ಕರೆತಂದಿದ್ದರು. ಏನೂ ಅರಿಯದ, ಅಬೋಧ ಕಂಗಳಿಂದ ನೋಡುವ ಮಗುವನ್ನು ಕಂಡ ಪೊಲೀಸರು ಸೇರಿ ಎಲ್ಲರ ಕರುಳು ಚುರ್ ಎನ್ನುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net