

ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿಸಿ ಬ್ಯಾಂಕ್‌ನಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ಮೋಸ-ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿಂದಗಿ ಪಟ್ಟಣದ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್‌ನಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಬ್ಯಾಂಕ್‌ನ ವ್ಯವಸ್ಥಾಪಕರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬ್ಯಾಂಕ್‌ನ ಸದಸ್ಯರೇ ಈ ಕೃತ್ಯ ಎಸಗಿದ್ದಾರೆ. ಸದಸ್ಯರಾದ ಸಂಜೀವ ಕೇಸವರಾವ ದೇಶಪಾಂಡೆ ಹಾಗೂ ಸೌಮ್ಯ ಆನಂದ ಮುದಿಗೌಡರ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಇಬ್ಬರೂ ಪ್ರತ್ಯೇಕವಾಗಿ ಒಟ್ಟು 50 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಸಿಂದಗಿಯ ವಿದ್ಯಾನಗರದ 2ನೇ ಕ್ರಾಸ್‌ನ ನಿವಾಸಿಯಾಗಿರುವ ಸಂಜೀವ ಕೇಸವರಾವ ದೇಶಪಾಂಡೆ ಇವರು ವಾರ್ಡ್ ನಂ.1ರಲ್ಲಿರುವ ಪುರಸಭೆ ಆಸ್ತಿ ನಂ.2681/ಸಿ/6ನ್ನು ಅಡಮಾನ ಇಟ್ಟು, 25 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಅಡಮಾನ ಪತ್ರವನ್ನು ಸಬ್ ರಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಡಿರುವುದಾಗಿ ಹೇಳಿ ಮೂಲ ಪ್ರತಿ ಸಲ್ಲಿಸಿದ ನಂತರವೇ ಸಾಲ ನೀಡಲಾಗಿದೆ. ಈ ಸಾಲಕ್ಕೆ ಪ್ರವೀಣ ಗುರುಪಾದಪ್ಪ ಹಾಲಳ್ಳಿ, ಮಹಿಮೂದ ಅಹ್ಮದ್‌ಸಾಬ್ ಜರ್ದಿ, ಆನಂದ ಅಪ್ಪಾಸಾಹೇಬ ಮುದಿಗೌಡರ ಜಾಮೀನುದಾರರಾಗಿದ್ದಾರೆ.
ಆದರೆ, ಕೆಲವು ಕಂತು ಕಟ್ಟಿ ಬಳಿಕ ಸಾಲ ಭರಣಾ ಮಾಡದೇ ಕಟಬಾಕಿದಾರರಾದ ಹಿನ್ನೆಲೆ ಆಡಳಿತ ಮಂಡಳಿ ನಿರ್ದೇಶನದ ಪ್ರಕಾರ ಸಾಲ ವಸೂಲಾತಿಗಾಗಿ ಪ್ರಕರಣ ದಾಖಲಿಸಲು ಋಣಭಾರ ಪತ್ರ ಹೊಸದಾಗಿ ತೆಗೆಯಿಸಿ ಪರಿಶೀಲಿಸಲಾಗಿ ಋಣಭಾರ ಪತ್ರದಲ್ಲಿ ಅಡಮಾನ ಪತ್ರದ ಬಗ್ಗೆ ಉಲ್ಲೇಖ ಇಲ್ಲದಿರುವುದು ಕಂಡು ಬಂದಿದೆ. ಬ್ಯಾಂಕ್‌ನಲ್ಲಿ ಸಲ್ಲಿಸಿದ ಅಡಮಾನ ಪತ್ರ ಹಾಗೂ ಖರೀದಿ ಪತ್ರದ ನಕಲು ತೆಗೆದು ನೋಡಲಾಗಿ ದಾಖಲಾತಿಗಳಲ್ಲಿ ಆರೋಪಿತನು ನೀಡಿದ ಅಡಮಾನ ಪತ್ರದ ದಸ್ತ ನಂ. 1897 ಅಂತಾ ಇದ್ದು, ಈ ನಂಬರ್‌ನ ದಾಖಲಾತಿ ಸಿಂದಗಿ ಸಬ್ ರಜಿಸ್ಟಾರ್ ಕಚೇರಿಯಲ್ಲಿ ತೆಗೆಯಿಸಿ ನೋಡಲಾಗಿ ಭೀಮನಗೌಡ ಊರ್ಫ್ ಭೀಮರಾಯ ಸಿದ್ದಪ್ಪ ಬಿರಾದಾರ ಇವರ ಖರೀದಿ ಪತ್ರದ ರದ್ಧತಿ ಪತ್ರ ಆಗಿದ್ದು, ಇದರಿಂದಾಗಿ ಅಡಮಾನ ಇರಿಸಿರುವ ಆಸ್ತಿಯನ್ನು ರುದ್ರಗೌಡ ಬಾಬುಗೌಡ ಪಾಟೀಲ ಎಂಬುವವರಿಗೆ ದಸ್ತ ನೋಂದ ಪ್ರಕಾರ ಮಾರಾಟ ಮಾಡಿರುವುದು ಗೊತ್ತಾಗಿದೆ. ಖೊಟ್ಟಿ ದಾಖಲೆ ಸೃಷ್ಠಿ ಮಾಡಿ ಬ್ಯಾಂಕ್ ಸಾಲ ಪಡೆದು ಸಾಲ ಮಂಜೂರಾತಿ ಬಳಿಕ ಖರೀದಿ ಪತ್ರ, ಅಡಮಾನ ಪತ್ರವನ್ನು ಖೊಟ್ಟಿಯಾಗಿ ಸೃಷ್ಠಿಸಿ ಅದಕ್ಕೆ ಪೂರಕ ಋಣಭಾರ ಪತ್ರ ಸಹ ಖೊಟ್ಟಿಯಾಗಿ ಸೃಷ್ಠಿಸಿ ಬ್ಯಾಂಕ್‌ಗೆ ಅವು ಊರ್ಜಿತ ಎಂದು ನಂಬಿಸಿ ಸಾಲ ಪಡೆದು ಮರಳಿ ಭರಣಾ ಮಾಡದೇ ಮೋಸ ವಂಚನೆ ಮಾಡಿದ್ದಾರೆ.
ಇನ್ನು ಸೌಮ್ಯ ಆನಂದ ಮುದಿಗೌಡರ ಸಹ ಮಾಲ್ಕಿ ಕಬ್ಜಾ ವಹಿವಾಟಿನಲ್ಲಿರುವ ಸಿಂದಗಿ ಪಟ್ಟಣದ ವಾರ್ಡ್ ನಂ.12 ರಲ್ಲಿ ಬರುವ ಪುರಸಭೆ ಆಸ್ತಿ ನಂ. 794/ಬ/108+109 ಅಡಮಾನ ಇಟ್ಟು 25 ಲಕ್ಷ ರೂಪಾಯಿ ಪಡೆದಿದ್ದಾರೆ. ಈ ಸಾಲಕ್ಕೆ ಸಂಜೀವ ಕೇಶವರಾವ ದೇಶಪಾಂಡೆ, ಪ್ರವೀಣ ಗುರುಪಾದಪ್ಪ ಹಾಲಳ್ಳಿ, ಆನಂದ ಅಪ್ಪಾಸಾಹೇಬ ಮುದಿಗೌಡ ಜಾಮೀನು ನೀಡಿದ್ದಾರೆ.
ಸಾಲ ಪಡೆದ ಬಳಿಕ ಕಟಬಾಕಿದಾರರಾದ ಹಿನ್ನೆಲೆ ಸಾಲ ವಸೂಲಾತಿಗಾಗಿ ಹೊಸದಾಗಿ ಋಣಭಾರ ಪತ್ರ ತೆಗೆಯಿಸಿ ನೋಡಲಾಗಿ ಋಣಭಾರ ಪತ್ರದಲ್ಲಿ ಅಡಮಾನ ಪತ್ರದ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಹೀಗಾಗಿ ಅಡಮಾನ ಪತ್ರ ಹಾಗೂ ಖರೀದಿ ಪತ್ರಗಳ ದೃಢೀಕೃತ ನಕಲು ತೆಗೆಯಿಸಿ ಪರಿಶೀಲಿಸಲಾಗಿ ಬ್ಯಾಂಕ್‌ಗೆ ನೀಡಿದ ಅಡಮಾನ ಪತ್ರದ ದಸ್ತ್ ನಂ.1723/2021/22 ಅಂತಾ ಇದ್ದು ಈ ನಂಬರ್‌ನ ದಾಖಲಾತಿ ತೆಗೆಯಿಸಿ ನೋಡಲಾಗಿ ಸಿದ್ದಪ್ಪ ರುದ್ರಮುನಿ ಹೊಸಮನಿ ಆಲಮೇಲ ಇವರಿಗೆ ಸಂಬಂಧಿಸಿದ್ದಾಗಿರುತ್ತದೆ. ಬ್ಯಾಂಕ್‌ಗೆ ಅಡಮಾನ ಇಟ್ಟಿರುವುದಾಗಿ ಹೇಳಿದ ಆಸ್ತಿ ಸಂಖ್ಯೆ ಶಿವಲೀಲಾಸಂಗಮೇಶ ಪಾಟೀಲ ಎಂಬುವರಿಗೆ ದಸ್ತ ನೋಂದ ಪ್ರಕಾರ ಮಾರಾಟ ಮಾಡಿದ್ದು ಇರುತ್ತದೆ.
ಹೀಗಾಗಿ ಈ ಇಬ್ಬರು ಬ್ಯಾಂಕ್‌ನಿಂದ ಸಾಲ ಪಡೆದು ಮರಳಿ ಭರಣಾ ಮಾಡದೇ ಮೋಸ ಹಾಗೂ ವಂಚನೆ ಮಾಡಿದ್ದಾರೆಂದು ಆರೋಪಿಸಿ ವ್ಯವಸ್ಥಾಪಕ ಬಸವರಾಜ ಭೀಮಣ್ಣ ದೇವೂರ ಸಿಂದಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.