ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಹಿನ್ನೆಲೆ, ಕಾಂಗ್ರೆಸ್ ಕಾರ್ಯಕರ್ತರ ಮೌನ ಪ್ರತಿಭಟನೆ

IMG20230712155230.jpg
Published on

ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಕರೆ ನೀಡಿದ ಮೌನ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಬುಧವಾರ ನಗರದ ಕಾಂಗ್ರೆಸ್ ಭವನದ ಎದುರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.
‘ಸರ್ವಾಧಿಕಾರಿ ಧೋರಣೆಯ ಮೋದಿ ಅವರಿಗೆ ಧಿಕ್ಕಾರ, ನಮ್ಮ ಹೆಜ್ಜೆ ಜನತಾ ನ್ಯಾಯಾಲಯದತ್ತ, ರಾಹುಲ್ ಗಾಂಧಿಯವರ ಸತ್ಯದ ನಡಿಗೆಯಲ್ಲಿ ನಮ್ಮ ಹೆಜ್ಜೆ’ ಎಂಬ ಬರಹಗಳಿದ್ದ ಫಲಕ ಹಿಡಿದು ಬೆಳಗ್ಗೆಯಿಂದ ಸಂಜೆವರೆಗೆ ಮೌನವಾಗಿ ಪ್ರತಿಭಟನೆ ಮಾಡಿದರು.
ವಿಧಾನ ಪರಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಮಾತನಾಡಿ, ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್‌ನಿಂದ ಮೌನ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿ ಗುಜರಾತ ನ್ಯಾಯಾಲಯ ನೀಡಿರುವ ತೀರ್ಪು ಖಂಡಿಸಿದ್ದೇವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ದೃಢಪಡಿಸಲು, ಅದಕ್ಕೆ ಬೆಂಬಲಿಸಲು ನಾವೆಲ್ಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ ಎಂದರು.
ಮಂಗಳೂರು, ಬೆಂಗಳೂರು ಸೇರಿ ರಾಜ್ಯದ ಅನೇಕ ಜೈಲುಗಳಲ್ಲಿ ಬಹಳಷ್ಟು ಅಪರಾಧಿಗಳಿದ್ದಾರೆ. ಅವರೆಲ್ಲ ಕಾಂಗ್ರೆಸ್ ಬಂದ ಮೇಲೆ ಜೈಲಿನಲ್ಲಿ ಇದ್ದಾರೆಯೇ ಎಂಬುದನ್ನು ಬಿಜೆಪಿಯ ನಳಿನಕುಮಾರ್ ಕಟೀಲ ಅವರು ಮೊದಲು ಹೇಳಲಿ. ಅಪರಾಧ ಚಟುವಟಿಕೆ ಮಾಡಿದವರು ಜೈಲಿನಲ್ಲಿ ಇರುತ್ತಾರೆ. ಅದಕ್ಕೆ ಕಾಂಗ್ರೆಸ್ ಹೊಣೆ ಅಲ್ಲ. ಅವರ ಸರ್ಕಾರದ ವೇಳೆ ಬೀದಿಗಳಲ್ಲಿ ಕೊಲೆ ಮಾಡುವುದು ನಿಂತಿದೆ. ನೈತಿಕ ಪೊಲೀಸಗಿರಿ ಮಾಡುವವರು ಈ ರೀತಿ ಆಪಾದನೆ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ತಿರುಗೇಟು ನೀಡಿದರು.
ಕಾಂಗ್ರೆಸ್ ಸರ್ಕಾರ ಬಂದ ನಂತರ ನೈತಿಕ ಪೊಲೀಸ್ ಗಿರಿ ಮಾಡಲು ರಾಜ್ಯದಲ್ಲಿ ಎಲ್ಲಿಯೂ ಅವಕಾಶ ಕೊಡುತ್ತಿಲ್ಲ. ಇದರಿಂದ ಅವರಿಗೆ ಉಸಿರುಗಟ್ಟಿದ ಹಾಗೆ ಆಗಿದೆ. ಅದಕ್ಕೆ ಕಟೀಲ್ ಅವರು ಈ ರೀತಿ ಪಿಟೀಲು ಬಾರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
2018ರಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟಾಗ 54 ಲಕ್ಷ ಕೋಟಿ ರೂ. ಸಾಲವಿತ್ತು. ಅದಾದ ಬಳಿಕ ಬೊಮ್ಮಾಯಿ ಅವರು ಎಷ್ಟು ಸಾಲ ಮಾಡಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಲಿ. ಸಾಲ ಹೆಚ್ಚು ಮಾಡಿದ್ದಾರೆ, ಅಭಿವೃದ್ಧಿ ಕೆಲಸ ಹೆಚ್ಚು ಮಾಡಿಲ್ಲ. ಈಗ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ, ರಾಹುಲ್ ಗಾಂಧಿ ಅವರ ಜನಪ್ರಿಯತೆ ಸಹಿಸಿಕೊಳ್ಳದೆ, ಅವರ ಧ್ವನಿ ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಇದ್ಯಾವುದಕ್ಕೂ ರಾಹುಲ್ ಗಾಂಧಿ ಅವರು ಹೆದರುವ ಪ್ರಶ್ನೆಯೇ ಇಲ್ಲ. ನಾವು ಅವರೊಂದಿಗೆ ಇದ್ದೇವೆ ಎಂದರು.
ಆಯಿಷಾ ಸನದಿ, ಪ್ರದೀಪ ಎಂ.ಜೆ., ಬಸವರಾಜ ಶೇಗಾವಿ, ಶೇಖರ ಇಟಿ, ಕಲ್ಪನಾ ಜೋಶಿ, ಮೋಹನ ರೆಡ್ಡಿ, ಜಗದೀಶ ಸಾವಂತ, ರೋಹಿಣಿ ಬಾಬಸೇಟ್, ರೇಖಾ ಇಂಡಿಕರ, ಶ್ರೀಕಾಂತ ನೇಗಿನಹಾಳ, ಎ.ಎಂ.ಲೋದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net