ಪೊಲೀಸ್ ಕಮಿಷನರೇಟ್​ಗೆ ಮುತ್ತಿಗೆ ನಿರ್ಧಾರ

POLICE CAP
Published on

ಧಾರವಾಡ: ಪೊಲೀಸರು ಹಾಗೂ ವಕೀಲರ ನಡುವಿನ ಸಮರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ವಕೀಲ ವಿನೋದ ಪಾಟೀಲ ಅವರನ್ನು ಬಂಧಿಸಿ ಬೇಡಿ ಹಾಕಿದ್ದಕ್ಕಾಗಿ ಇನ್​ಸ್ಪೆಕ್ಟರ್ ಪ್ರಭು ಸೂರಿನ್ ಅವರನ್ನು ಅಮಾನತು ಮಾಡಲು ಪಟ್ಟು ಹಿಡಿದಿರುವ ವಕೀಲರು, ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ತೀರ್ವನಿಸಿದ್ದಾರೆ.

ಈಗಾಗಲೇ ಪ್ರಭು ಸೂರಿನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ವಕೀಲರು ಮಾತ್ರ ಅವರನ್ನು ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೆಕು ಎಂದು ಆಗ್ರಹಿಸಿದ್ದಾರೆ. ಈ ವಿಷಯವಾಗಿ ಧಾರವಾಡ ವಕೀಲರ ಸಂಘದಲ್ಲಿ ಸೋಮವಾರ ಸಭೆ ನಡೆಸಿ, ಮಂಗಳವಾರ ಮಧ್ಯಾಹ್ನದವರೆಗೆ ಗಡುವು ನೀಡಿದ್ದರು. ಸದ್ಯಕ್ಕೆ ಅವರ ಆಗ್ರಹದಂತೆ ಕ್ರಮವಾಗಿಲ್ಲ.

ಆದರೆ, ಮಂಗಳವಾರ ಮತ್ತೆ ಸಂಘದಲ್ಲಿ ಜಿಲ್ಲೆಯ ಎಲ್ಲ ವಕೀಲರ ಸಂಘದ ಪದಾಧಿಕಾರಿಗಳ ಸಭೆ ನಡೆಸಿ, ಪ್ರಭು ಸೂರಿನ್ ಅವರನ್ನು ಕೂಡಲೆ ಅಮಾತನತು ಮಾಡಬೇಕು. ಉಳಿದ ಸಿಬ್ಬಂದಿ ವಿರುದ್ಧ ಡಿ. 4ರ ಮಧ್ಯಾಹ್ನ 2 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕು ಎಂದು ಗಡುವು ನೀಡಿದ್ದಾರೆ.

ಈ ಅವಧಿಯಲ್ಲಿ ಕ್ರಮಕೈಗೊಳ್ಳದೆ ಇದ್ದಲ್ಲಿ ಡಿ. 7ರಂದು ನವನಗರದಲ್ಲಿನ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ. ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ಎಸ್. ಗೋಡಸೆ, ಪ್ರಧಾನ ಕಾರ್ಯದರ್ಶಿ ಎನ್.ಆರ್. ಮಟ್ಟಿ, ಕಲಘಟಗಿ, ನವಲಗುಂದ, ಕುಂದಗೋಳ ವಕೀಲರ ಸಂಘದ ಪದಾಧಿಕಾರಿಗಳು, ಇತರರು ಇದ್ದರು.

ಇನ್​ಸ್ಪೆಕ್ಟರ್ ವಿರುದ್ಧ ಕ್ರಮ ಬೇಡ

ಹುಬ್ಬಳ್ಳಿ: ಪೊಲೀಸ್-ವಕೀಲರ ಜಟಾಪಟಿ ಪ್ರಕರಣದಲ್ಲಿ ಎಪಿಎಂಸಿ- ನವನಗರ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಪ್ರಭು ಸೂರಿನ್ ಹಾಗೂ ಸಿಬ್ಬಂದಿ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ವಕೀಲ ವಿನೋದ ಪಾಟೀಲ ಕರ್ತವ್ಯ ನಿರತ ಇನ್​ಸ್ಪೆಕ್ಟರ್ ಹಾಗೂ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಅನಿವಾರ್ಯವಾಗಿ ಠಾಣೆಗೆ ಕರೆದೊಯ್ದು ಕಾನೂನು ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಅಧಿಕಾರಿ, ಸಿಬ್ಬಂದಿ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಒತ್ತಡ ಹೇರುವ ತಂತ್ರ ಅನುಸರಿಸುತ್ತಿರುವುದು ಖಂಡನಾರ್ಹ. ಹಾಗಾಗಿ, ಇನ್​ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಡಿಎಸ್​ಎಸ್ ಕಾರ್ಯಕರ್ತರು ಡಿಸಿಪಿ ಕೆ. ರಾಮರಾಜನ್ ಅವರನ್ನು ಭೇಟಿಯಾಗಿ ಲಿಖಿತ ಪತ್ರ ಸಲ್ಲಿಸಿದ್ದಾರೆ.

ಲಕ್ಷ್ಮಣ ದೊಡ್ಡಮನಿ, ನಾರಾಯಣ ಮಾದರ, ಹನುಮಂತ ಮೊರಬ, ಶಬ್ಬೀರ ಅತ್ತಾರ, ನಿಂಗರಾಜ ಅದರಖಂಡಿ, ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net