ವಿಮರ್ಷಕರ ಕೊರತೆ ನಿವಾರಣೆಯಾಗಬೇಕು

22-10-Shiva-7
ರಾಯಚೂರಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲಕ್ಷ್ಮಿದೇವಿ ಶಾಸಿಯ ಪ್ಯಾಸಾ ಸಾವನ್ ಕವನ ಸಂಕಲವನ್ನು ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಲೋಕಾರ್ಪಣೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸಾಹಿತಿಗಳಾದ ಮಂಡಲಗಿರಿ ಪ್ರಸನ್ನ, ಲಕ್ಷ್ಮಿದೇವಿ ಶಾಸಿ ಇದ್ದರು.
Published on

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ತಿಕ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲ. ಆದರೆ ವಿಮರ್ಷಕರ ಕೊರತೆಯಿಂದಾಗಿ ಪ್ರತಿಭೆಗಳಿಗೆ ಪ್ರೋತ್ಸಾಹವಿಲ್ಲದಂತಾಗಿದೆ ಎಂದು ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಏರ್ಪಡಿಸಿದ್ದ ಲಕ್ಷ್ಮಿದೇವಿ ಶಾಸಿಯ ಪ್ಯಾಸಾ ಸಾವನ್ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಈ ಭಾಗದಲ್ಲಿ ಎಲ್ಲ ರೀತಿಯ ಪ್ರಕಾರ ಸಾಹಿತ್ಯದ ಕೃಷಿ ನಡೆದಿದ್ದು, ಹಲವರು ಗಣನೀಯ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಎಂದರು.
ಮಹಿಳೆಯರ ಚಿಂತನಶೀಲತೆ ಮತ್ತು ಬರವಣಿಗೆಗೆ ಪುರುಷರು ಮುಳುವಾಗಿದ್ದಾರೆ ಎನ್ನುವ ಮಾತುಗಳು ತಪ್ಪು ಅಭಿಪ್ರಾಯವಾಗಿದೆ. ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಬರಹಗಾರರಿದ್ದು, ಅವರಿಗೆ ಪ್ರೋತ್ಸಾಹ ದೊರೆಯಬೇಕಾದ ಅಗತ್ಯವಿದೆ. ಜತೆಗೆ ವಿಮರ್ಷೆಯ ಮೂಲಕ ಗುರುತಿಸುವ ಕ್ರಿಯೆ ನಡೆಯಬೇಕಾಗಿದೆ ಎಂದು ಅಯ್ಯಪ್ಪಯ್ಯ ಹುಡಾ ಹೇಳಿದರು.
ಸಾಹಿತಿ ಮಂಡಲಗಿರಿ ಪ್ರಸನ್ನ ಕೃತಿ ಬಗ್ಗೆ ಮಾತನಾಡಿ, ಕವಿಗೆ ಪ್ರೀತಿ, ಪ್ರೇಮ, ಶೃಂಗಾರ ಮತ್ತು ಸಂಕಟದ ಸಂದರ್ಭಗಳು ಕಾವ್ಯದ ವಸ್ತುವಾಗುತ್ತವೆ. ಈ ನಿಟ್ಟಿನಲ್ಲಿ ಪ್ಯಾಸಾ ಸಾವನ್ ಕೃತಿ ನೋವು, ತಳಮಳ, ಬದುಕಿನ ಬವಣೆಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿದೆ. ಕವಿಯ ಕಾವ್ಯ ಶೈಲಿ ಆತನ ಭಾವೋದ್ವೇಗ ಹಾಗೂ ಕಲ್ಪನೆಗಳನ್ನು ಅಭಿವ್ಯಕ್ತಿಸುವ ಸಾಧನವಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸಾಹಿತಿ ಲಕ್ಷ್ಮಿದೇವಿ ಶಾಸಿ, ಶಿಕ್ಷಕಿ ಕಲ್ಪನಾ ಜೈನ್, ವಿಶ್ವನಾಥ ಶಾಸಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net