ಹಡಗಲಿ ಆದರ್ಶ ಇತರರಿಗೂ ಮಾದರಿ

7 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಜಿನದತ್ತ ಹಡಗಲಿ ಸ್ನೇಹಜೀವಿ, ಸದಾ ಹಸನ್ಮುಖಿಯಾಗಿ ಇತರರನ್ನು ನಗಿಸುತ್ತ, ಮಧುರ ಮಾತುಗಳಿಂದ ಕೂಡಿದ ಅವರ ಆದರ್ಶ, ವ್ಯಕ್ತಿತ್ವ ಬೆಲ್ಲದ ಅಚ್ಚಿದ್ದಂತೆ. ಸದಾ ಪ್ರೀತಿ ನಗು ಹಂಚುವ ಅವರ ಗುಣ ವಿಶೇಷವಾದದ್ದು ಎಂದು ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಜೆಎಸ್​ಎಸ್​ ಆವರಣದಲ್ಲಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಡಾ. ಜಿನದತ್ತ ಹಡಗಲಿ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಾಹಿತ್ಯಾವಲೋಕನ, ಅಭಿನಂದನೆ ಮತ್ತು ಸ್ನೇಹ ಸಿಂಧು ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಜಿನದತ್ತ ಹಡಗಲಿ ಅವರ ವೈಚಾರಿಕ ಕೃತಿಯಾದ ಸಿಂಚನ ವಿವಿಧ ವಿಷಯಗಳನ್ನು ಒಳಗೊಂಡ ಬಾನುಲಿ ಭಾಷಣಗಳ ಸಂಕಲನದ ಕೃತಿ. ಜೀವನ ಮೌಲ್ಯ, ಕಾಯಕ ತತ್ವ, ಸಂಟನೆಯಲ್ಲಿ ಯುವಕರು, ಗರತಿಯ ಗಮ್ಮತ್ತು ಹೀಗೆ ವಿವಿಧ ವಿಷಯಗಳನ್ನು ಒಳಗೊಂಡ ಲೇಖನಗಳು ಇದರಲ್ಲಿವೆ. ಇವತ್ತಿನ ಜನಾಂಗಕ್ಕೆ ಇವು ಉಪಯುಕ್ತ ಕೊಡುಗೆಯಾಗಿವೆ ಎಂದರು.
ಸಾಹಿತಿ ಡಾ. ವೈ.ಎಂ.ಯಾಕೊಳ್ಳಿ ಮಾತನಾಡಿ, ಈ ಕೃತಿ ಜೈನ ಧರ್ಮದ ಇತಿಹಾಸ, ಜೈನ ಮುನಿಗಳು, ಜೈನ ಧರ್ಮದ ತತ್ವಗಳು ಹೀಗೆ ಅನೇಕ ವಿಚಾರಗಳನ್ನು ಒಳಗೊಂಡಿದೆ ಎಂದರು.
ಡಾ. ಶಶಿಧರ ನರೇಂದ್ರ ಮಾತನಾಡಿ, ಹಡಗಲಿ ಅವರ ಬಾನುಲಿ ಬರಹಗಳು ಬಹಳ ಅರ್ಥರ್ಪೂಣವಾಗಿವೆ. ಅವುಗಳಲ್ಲಿ ಬಳಕೆಯಾದ ಶಬ್ಧ ಪ್ರಯೋಗ, ವಿಷಯ ವಸ್ತು, ವಿಷಯ ಸಮಗ್ರತೆಯ ದೃಷ್ಟಿಯಿಂದ ಇವರ ಬಾನುಲಿ ಬರಹಗಳು ವಿಶಿಷ್ಟವಾಗಿವೆ. ಜತೆಗೆ ನಾಟಕ ಕ್ಷೇತ್ರದಲ್ಲೂ ಹಡಗಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ಹಡಗಲಿ ಅವರ ಸಂಪಾದಿತ ಕೃತಿಗಳ ಕುರಿತು ಡಾ. ಅರ್ಜುನ ಗೊಳಸಂಗಿ ಮಾತನಾಡಿದರು. ಸಾಹಿತಿ ಡಾ. ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿನದತ್ತ ಹಡಗಲಿ ಅವರಿಗೆ ಶಿಕ್ಷಣ ನೀಡಿ ಮಾರ್ಗದರ್ಶನ ಮಾಡಿದ ಗುರುಗಳಿಗೆ ಗುರುವಂದನೆ ಕಾರ್ಯಕ್ರಮವನ್ನು ಹಡಗಲಿ ಕುಟುಂಬಸ್ಥರು ನಡೆಸಿದರು.
ಡಾ. ಆರ್​.ವಿ.ಪಾಟೀಲ ಸ್ವಾಗತಿಸಿದರು. ಡಾ. ಬಿ.ಎಂ.ಶರಭೇಂದ್ರ ಸ್ವಾಮಿ ನಿರೂಪಿಸಿದರು. ಡಾ. ಶಿವಾನಂದ ಟವಳಿ ನಿರೂಪಿಸಿದರು. ಡಾ. ಸಂಗಯ್ಯ ಶಿವಪ್ಪಯ್ಯನಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net