ಕೃಷಿ ವಿವಿಯ ಕೃಷಿ ಮೇಳಕ್ಕೆ ಬರದ ಛಾಯೆ!

11-01-Shiva-1
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಹೊರನೋಟ.
Published on

ರಾಯಚೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ರಾಜ್ಯದಲ್ಲಿ ತೀವ್ರ ಬರದ ಛಾಯೆ ಇರುವುದರಿಂದ ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರತಿವರ್ಷ ನಡೆಸಲಾಗುತ್ತಿದ್ದ ಕೃಷಿ ಮೇಳವನ್ನು ಪ್ರಸಕ್ತ ಸಾಲಿನಲ್ಲಿ ರದ್ದುಗೊಳಿಸಲಾಗಿದೆ.
ವಿಶ್ವವಿದ್ಯಾಲಯ ಸ್ಥಾಪನೆಗಳು ಹದಿನೈದು ವರ್ಷಗಳು ಕಳೆಯುತ್ತಿರುವ ಸಂದರ್ಭದಲ್ಲಿ ಈ ಹಿಂದೆಯೂ ಒಂದು ಬಾರಿ ಬರದ ಕಾರಣಕ್ಕೆ ಹಾಗೂ ಎರಡು ಬಾರಿ ಕೋವಿಡ್ ಕಾರಣಕ್ಕೆ ಕೃಷಿ ಮೇಳವನ್ನು ರದ್ದುಗೊಳಿಸಲಾಗಿತ್ತು. ಈ ವರ್ಷ ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಕೃಷಿ ಮೇಳ ನಡೆಸುವುದು ಬೇಡ ಎನ್ನುವ ನಿರ್ಧಾರಕ್ಕೆ ವಿವಿ ಆಡಳಿತ ಮಂಡಳಿ ಬಂದಿದೆ.
ಬೆಂಗಳೂರು, ಧಾರವಾಡ ಕೃಷಿ ಮೇಳಗಳು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದರೂ ರಾಯಚೂರು ಕೃಷಿ ವಿವಿಯ ಕೃಷಿ ಮೇಳದಲ್ಲಿ ರೈತರ ಪಾಲ್ಗೊಳ್ಳುವಿಕೆ ಹೆಚ್ಚಾಗಿ ಕಂಡು ಬರುತ್ತಿತ್ತು. ಜತೆಗೆ ರೈತರು ಮೇಳ ತಮ್ಮದೇ ಎನ್ನುವ ರೀತಿಯಲ್ಲಿ ಮೂರು ದಿನ ನಡೆಯುವ ಮೇಳದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದರು.
ವಿವಿಯಿಂದ ಪ್ರತಿವರ್ಷ ಡಿಸೆಂಬರ್‌ನಲ್ಲಿ ಕೃಷಿ ಮೇಳವನ್ನು ಮೂರು ದಿನಗಳ ಕಾಲ ಆಯೋಜಿಸುತ್ತಾ ಬರಲಾಗುತ್ತಿತ್ತು. ರೈತರಿಗಾಗಿ ಕೃಷಿ ಯಂತ್ರೋಪಕರಣ, ಕೀಟನಾಶಕ ಸೇರಿದಂತೆ ಕೃಷಿ ಸಂಬಂತ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸುವುದರ ಜತೆಗೆ ವಿವಿಧ ಗೋಷ್ಠಿ, ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿತ್ತು.
ಕೃಷಿಯಲ್ಲಿ ಗಣನೀಯ ಸಾಧನೆಗೈದವರಿಗೆ ಪ್ರಗತಿಪರ ರೈತ ಮತ್ತು ಪ್ರಗತಿಪರ ರೈತ ಮಹಿಳೆ ಪ್ರಶಸ್ತಿಯನ್ನು ಕೃಷಿ ಮೇಳದಲ್ಲಿ ವಿವಿಯಿಂದ ಪ್ರದಾನ ಮಾಡಲಾಗಿತ್ತಿತ್ತು. ಮೇಳದಿಂದ ರೈತರಿಗೆ ಹಲವು ತಂತ್ರಜ್ಞಾನಗಳನ್ನು ಪರಿಚಯ ಮಾಡಿಕೊಳ್ಳಲು ಹಾಗೂ ಹೊಸ ಕೃಷಿ ಸಂಬಂತ ಯಂತ್ರೋಪಕರಣಗಳನ್ನು ಪ್ರಾಯೋಗಿಕವಾಗಿ ನೋಡಲು ಅನುಕೂಲವಾಗಿತ್ತಿತ್ತು.
ಮುಂಗಾರು ಮತ್ತು ಹಿಂಗಾರು ಸಂಪೂರ್ಣ ವಿಲವಾಗಿದ್ದು, ರಬಿ ಮಳೆಯೂ ಬಾರದಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮೇಳ ಆಯೋಜಿಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯಕ್ಕೆ ವಿವಿ ಆಡಳಿತ ಮಂಡಳಿ ಬಂದಿರುವ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದಲೂ ಮೇಳ ಆಯೋಜನೆ ಬೇಡ ಎನ್ನುವ ಸಲಹೆ ಬಂದಿರುವುದರಿಂದ ಕೃಷಿ ಮೇಳವನ್ನು ರದ್ದುಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ತೀವ್ರ ಬರದ ಪರಿಸ್ಥಿತಿಯಿರುವ ಕಾರಣ ಪ್ರಸಕ್ತ ಸಾಲಿನಲ್ಲಿ ಕೃಷಿ ಮೇಳ ಆಯೋಜಿಸುವುದನ್ನು ಕೈಬಿಡಲಾಗಿದೆ. ಅದರ ಬದಲು ರೈತರಿಗಾಗಿ ಒಂದು ದಿನದ ಕಾರ್ಯಾಗಾರ ನಡೆಸಿ ಅವರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. - ಡಾ.ಎಂ.ವೀರನಗೌಡ, ಕುಲಸಚಿವ, ಕೃಷಿ ವಿಜ್ಞಾನಗಳ ವಿವಿ, ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net