ಕಾರ್ಮಿಕರ ಕಾಲನಿ ವಸತಿಗಳಿಗೆ ನುಗ್ಗಿದ ಮಲಿನ ನೀರು

hutti rain
ಹಟ್ಟಿಚಿನ್ನದಗಣಿ ಕಾರ್ಮಿಕ ಕಾಲನಿಯಲ್ಲಿ ಮಳೆ ನೀರು ಸಂಗ್ರಹಗೊಂಡಿರುವುದು.
Published on

ಹಟ್ಟಿಚಿನ್ನದಗಣಿ: ಮಳೆಯಿಂದ ಇಲ್ಲಿನ ಕಾರ್ಮಿಕರ ಕಾಲನಿಗಳು ಶನಿವಾರ ಜಲಾವೃತಗೊಂಡು ಜನಜೀವನ ಸಂಕಷ್ಟಕ್ಕೀಡಾಗಿದೆ. ಮನೆಗಳಿಗೆ ನೀರು ನುಗ್ಗಿ ದವಸಧಾನ್ಯಗಳು ನೀರುಪಾಲಾದವು. ಅಲ್ಲದೆ, ಶೌಚಗೃಹ ತುಂಬಿ ಗಲೀಜು ನೀರು ಮನೆಗಳಿಗೆ ಹರಿದ ಪರಿಣಾಮ ಜನರು ಮೂಗುಮುಚ್ಚಿಕೊಂಡು ಇರುವಂತಾಗಿದೆ.

ಗಣಿ ಕಂಪನಿಯ ಜತ್ತಿ ಕಾಲನಿ, ಗಾಂಧಿ ಮೈದಾನದ ಕಾರ್ಮಿಕರ ಕಾಲನಿಯ ಮನೆಗಳಿಗೆ ಮಳೆ ನೀರಿನ ಜತೆ ಶೌಚಗೃಹದ ಗಲೀಜು ನುಗ್ಗಿದ ಕಾರಣ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ದುರ್ವಾಸನೆಯಿಂದ ಕಿರಿಕಿರಿ ಅನುಭವಿಸಿದರು.

ಸೊಳ್ಳೆಗಳ ಉಪಟಳವೂ ಹೆಚ್ಚಿದ್ದರಿಂದ ಸಾಂಕ್ರಾಮಿಕ ರೋಗ ಹರಡುವ ಭಯ ಆವರಿಸಿದೆ. ಶೌಚಗೃಹ ಸ್ವಚ್ಛತೆಗೆ ಗುತ್ತಿಗೆ ಪಡೆದವರ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣ. ನಿಯಮಿತವಾಗಿ ಸ್ವಚ್ಛತೆ ನಡೆಸಿದ್ದರೆ ಕಾರ್ಮಿಕರ ಮನೆಗಳಿಗೆ ಮಲಿನ ನೀರು ನುಗ್ಗುತ್ತಿರಲಿಲ್ಲ. ಇದಕ್ಕೆ ಗಣಿಕಂಪನಿಯ ಅಧಿಕಾರಿಗಳು ಹೊಣೆಗಾರರಾಗುತ್ತಾರೆ.

ಅಧಿಕಾರಿಗಳು ಕೇವಲ ಕಡತಗಳ ಅಂಕಿಅಂಶ ನೋಡಿ ತೃಪ್ತರಾಗಿದ್ದಾರೆ. ಆದರೆ, ಕೆಳಹಂತದಲ್ಲಿ ಯಾವುದೇ ಕೆಲಸವೇ ನಡೆಯುತ್ತಿಲ್ಲ. ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕಾರ್ಮಿಕ ಮುಖಂಡರು, ಸ್ಥಳೀಯರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net