ವಿಷಗಾಳಿ ಉಣಿಸುತ್ತಿದೆ ಸೀವೇಜ್ ಫಾರ್ಮ್

mysore sewage farm
Published on

ಸದೇಶ್ ಕಾರ್ಮಾಡ್ ಮೈಸೂರು

ನಗರದ ಸೀವೇಜ್ ಫಾರ್ಮ್ ಸುತ್ತಮುತ್ತಲಿನ ನಿವಾಸಿಗಳು ಇಷ್ಟು ವರ್ಷ ತ್ಯಾಜ್ಯದಿಂದ ಹೊರಹೊಮ್ಮುವ ವಿಷಗಾಳಿ ಸೇವಿಸಿ ತಮ್ಮ ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಹಾಗಾಗಿ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ವರ್ಷದ ಹಿಂದೆ ಚಾಲನೆ ದೊರೆಯಿತು. ಆದರೆ, ಗುತ್ತಿಗೆದಾರರ ನಿರ್ಲಕ್ಷೃದಿಂದ ನಗರದ ಜನರು ಭಾರಿ ಪ್ರಮಾಣದಲ್ಲಿ ವಿಷಗಾಳಿ ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೀವೇಜ್ ಫಾರ್ಮ್‌ನಲ್ಲಿ ಬೆಟ್ಟದ ರೀತಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯದಿಂದ ಸದಾ ದುರ್ವಾಸನೆ ಹೊರ ಹೊಮ್ಮುತ್ತದೆ. ಈ ಸಮಸ್ಯೆ ತಪ್ಪಿಸಲು ಕೇಂದ್ರ ಸರ್ಕಾರ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲು ಗುತ್ತಿಗೆ ನೀಡಿತ್ತು. ಆದರೆ, ಗುತ್ತಿಗೆದಾರರು ಬಯೋ ಮೈನಿಂಗ್ ಸಂದರ್ಭ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ತ್ಯಾಜ್ಯದಲ್ಲಿ ಬೆಂಕಿ ಕಾಣಿಸಿ ಕೊಂಡು ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಹೊತ್ತಿ ಉರಿದಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ವಿಷಗಾಳಿ ವಾತಾವರಣವನ್ನು ಸೇರಿದೆ. ಇದುವರೆಗೆ ತ್ಯಾಜ್ಯದ ದುರ್ವಾಸನೆಯ ಗಾಳಿ ಕುಡಿಯುವ ಅನಿವಾರ್ಯತೆ ಎದುರಿಸುತ್ತಿದ್ದ ಜನರು ಇದೀಗ ತ್ಯಾಜ್ಯದ ಬೆಂಕಿಯಿಂದ ಉತ್ಪತಿಯಾದ ವಿಷಗಾಳಿ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳು ಇದ್ದು, ಬೆಂಕಿಯು ಮನೆಗಳಿಗೆ ವ್ಯಾಪಿಸಿದ್ದರೆ ಅದರ ಹೊಣೆಯನ್ನು ಯಾರು ಹೊರುತ್ತಿದ್ದರು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಗುತ್ತಿಗೆದಾರರು ಸೀವೇಜ್ ಫಾರ್ಮ್‌ನಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಏತಕ್ಕೆ ಕೈಗೊಂಡಿಲ್ಲ ಎಂದು ಇದೀಗ ಎಲ್ಲರು ಪ್ರಶ್ನಿಸುತ್ತಿದ್ದಾರೆ. ಸಾಕಷ್ಟು ತ್ಯಾಜ್ಯದ ರಾಶಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಕೆಲಸ ಕಡಿಮೆಯಾಗಿದೆ. ಹಾಗಾಗಿ ಟೆಂಡರ್ ಮೊತ್ತವನ್ನು ಪರಿಷ್ಕರಣೆ ಮಾಡಬೇಕು. ಕೇವಲ ಬೂದಿಯನ್ನು ಎತ್ತಲು ಗುತ್ತಿಗೆದಾರರಿಗೆ ಹಣ ನೀಡುವ ಅವಶ್ಯಕತೆ ಇಲ್ಲ ಎಂಬ ಒತ್ತಾಯ ಕೇಳಿ ಬಂದಿದೆ. ಗುತ್ತಿಗೆದಾರರ ನಿರ್ಲಕ್ಷೃದ ವಿರುದ್ಧ ಟೀಕೆ ವ್ಯಕ್ತವಾದ ನಂತರ ನಗರ ಪಾಲಿಕೆಯು ಇದೀಗ ಕಾರಣ ಕೇಳಿ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದೆ.

60 ಕೋಟಿ ರೂ. ಯೋಜನೆ: ಸೀವೇಜ್ ಫಾರ್ಮ್‌ನಲ್ಲಿ ಒಟ್ಟು 7 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಇದನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲು 60 ಕೋಟಿ ರೂ.ಮೊತ್ತದ ಯೋಜನೆ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ತೆರವುಗೊಳಿಸಲಾಗುತ್ತಿದೆ. ನಗರ ಪಾಲಿಕೆಯ ತಂಡ ನಾಗಪುರಕ್ಕೆ ಭೇಟಿ ನೀಡಿ ಬಯೋಮೈನಿಂಗ್ ಕುರಿತು ಮಾಹಿತಿ ಸಂಗ್ರಹಿಸಿ ವರ್ಷದ ಹಿಂದೆ ನಾಗಪುರದ ಮಾದರಿಯಲ್ಲಿ ನಗರದ ಸೀವೇಜ್ ಫಾರ್ಮ್ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿಗೆ ಚಾಲನೆ ನೀಡಿತ್ತು.

ನಾಗಪುರದಲ್ಲಿ ಪ್ರತಿನಿತ್ಯ 800 ರಿಂದ 1,000 ಟನ್ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್, ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಮರು ಬಳಕೆ ಮಾಡಲಾಗುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಂಪನಿಗಳಲ್ಲಿ ಉರುವಲಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಣ್ಣನ್ನು ಲ್ಯಾಂಡ್‌ಫಿಲ್ಲಿಂಗ್‌ಗೆ ಬಳಕೆ ಮಾಡಲಾಗುತ್ತಿದೆ. ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಅದೇ ಮಾದರಿಯನ್ನು ಇಲ್ಲೂ ಕೂಡ ಅನುಸರಿಸಲಾಗುತ್ತಿದೆ. ಆದರೆ, ಸುರಕ್ಷತೆ ವಿಚಾರವನ್ನು ಗುತ್ತಿಗೆದಾರರು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಹಿಂದುಳಿಯಲು ಸೀವೇಜ್ ಫಾರ್ಮ್‌ನಲ್ಲಿ ಬೆಟ್ಟದ ರೀತಿಯಲ್ಲಿ ಬೆಳೆಯುತ್ತಿರುವ ತ್ಯಾಜ್ಯದ ರಾಶಿ ಕೂಡ ಒಂದು ಕಾರಣ. ಪ್ರತಿದಿನ ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ವಿಲೇವಾರಿ ಆಗಬೇಕು. ಆದರೆ, ಸಂಗ್ರಹವಾಗುವಷ್ಟು ತ್ಯಾಜ್ಯವನ್ನು ಆಯಾ ದಿನವೇ ಸಂಸ್ಕರಣೆ ಮಾಡುವಷ್ಟು ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ತ್ಯಾಜ್ಯದ ರಾಶಿ ಬೆಳೆಯುತ್ತಾ ಹೋಯಿತು. ಇದೀಗ ಕೆಸರೆ ಘಟಕ ಕಾರ್ಯಾರಂಭಗೊಂಡಿರುವ ಹಿನ್ನೆಲೆಯಲ್ಲಿ ಸೀವೇಜ್ ಫಾರ್ಮ್ ಮೇಲಿನ ಒತ್ತಡ ಕಡಿಮೆಯಾಗಿದೆ. ಇದೀಗ ಬೆಟ್ಟದ ರೀತಿಯಲ್ಲಿ ಬೆಳೆದಿರುವ ತ್ಯಾಜ್ಯವನ್ನು ಆದಷ್ಟು ಬೇಗ ತೆರವುಗೊಳಿಸಿ ಇನ್ನು ಮುಂದೆ ಈ ರೀತಿ ತ್ಯಾಜ್ಯದ ರಾಶಿ ನಿರ್ಮಾಣ ಆಗದ ರೀತಿಯಲ್ಲಿ ಎಚ್ಚರ ವಹಿಸಬೇಕಾಗಿದೆ.

ಸೀವೇಜ್ ಫಾರ್ಮ್‌ನಲ್ಲಿ ಸಂಗ್ರಹವಾಗಿರುವ 7 ಲಕ್ಷ ಟನ್ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡಲು ಗುತ್ತಿಗೆ ನೀಡಲಾಗಿದೆ. ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಆದರೆ, ಇತ್ತೀಚೆಗೆ ಸೀವೇಜ್ ಫಾರ್ಮ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಾಕಷ್ಟು ತ್ಯಾಜ್ಯ ಸುಟ್ಟು ಕರಕಲಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡು ಬಯೋಮೈನಿಂಗ್ ಕೈಗೊಳ್ಳದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಇದೀಗ ಬೆಂಕಿಯಿಂದ ಸಾಕಷ್ಟು ತ್ಯಾಜ್ಯ ಕರಗಿದೆ. ಹೀಗಾಗಿ 7 ಲಕ್ಷ ಟನ್ ತ್ಯಾಜ್ಯಕ್ಕೆ ಗುತ್ತಿಗೆದಾರರಿಗೆ ಹಣ ನೀಡಲು ಸಾಧ್ಯವಿಲ್ಲ. ಹಾಗಾಗಿ ಗುತ್ತಿಗೆದಾರರು ಎಷ್ಟು ಪ್ರಮಾಣದ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ ಎಂಬ ಆಧಾರದಲ್ಲಿ ಅವರಿಗೆ ಹಣ ನೀಡಲಾಗುವುದು.

ಶೇಖ್ ತನ್ವೀರ್ ಆಸಿಫ್, ನಗರ ಪಾಲಿಕೆ ಆಯುಕ್ತ

ಸೀವೇಜ್ ಫಾರ್ಮ್‌ನಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಮಾಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ 70 ಕೋಟಿ ರೂ.ಅನುದಾನ ನೀಡಿತು. ಆದರೆ, ಗುತ್ತಿದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷೃದಿಂದ ಸೀವೇಜ್ ಫಾರ್ಮ್‌ನಲ್ಲಿ ಬೆಂಕಿ ಕಾಣಿಸಿಕೊ ಂಡು ಅರ್ಧದಷ್ಟು ಕಸ ಸುಟ್ಟು ಕರಕಲಾಗಿದೆ. ಹೀಗಾಗಿ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಪೂರ್ಣ ಪ್ರಮಾಣದಲ್ಲಿ ಹಣ ನೀಡಬಾ ರದು. ತ್ಯಾಜ್ಯ ಸುಟ್ಟು ಸಾಕಷ್ಟು ವಿಷಕಾರಕ ಅಂಶಗಳು ಸುತ್ತಮುತ್ತಲಿನ ವಾತಾವರಣದಲ್ಲಿ ಸೇರ್ಪಡೆಯಾಗಿದ್ದು, ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು.

ಶಿವಕುಮಾರ್, ಮಾಜಿ ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net