ದೇಶ ರಕ್ಷಣೆಗೆ ಜೀವ ಮುಡಿಪಿಟ್ಟ ಯೋಧರ ಸೇವೆ ಅನನ್ಯ

aramy
Published on

ಸೇನೆಯಲ್ಲಿ 39 ವರ್ಷ ಸೇವೆ ಸಲ್ಲಿಸಿದ ಶಿವಣ್ಣ

ಕನಕಪುರ: ಸೇನೆಯಲ್ಲಿ 39 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗುರುವಾರ ತಾಯ್ನಾಡಿಗೆ ಆಗಮಿಸಿದ ಸೈನಿಕ ಸಾತನೂರು ಶಿವಣ್ಣ ಅವರನ್ನು ರೂರಲ್​ ಕಾಲೇಜು ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಎಂ.ಜಿ ರಸ್ತೆ ಮೂಲಕ ರೂರಲ್​ ಕಾಲೇಜು ಮಹಾತ್ಮ ಗಾಂಧಿ ಪ್ರತಿಮೆಯವರೆಗೂ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಪುಷ್ಪ ನಮನ ಸಲ್ಲಿಸಿ ಶಿವಣ್ಣ ಅವರನ್ನು ಬರಮಾಡಿಕೊಳ್ಳಲಾಯಿತು. ನಂತರ ರೂರಲ್​ ಕಾಲೇಜಿನ ಧುಂತೂರು ಮಾರೇಗೌಡರ ಸಭಾಂಗಣದಲ್ಲಿ ಯೋಧ ಶಿವಣ್ಣ ಹಾಗೂ ಅವರ ಪತ್ನಿ ಮಹದೇವಮ್ಮ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ಆರ್​.ಇ.ಎಸ್​ ಸಂಸ್ಥೆ ಅಧ್ಯಕ್ಷ ಎಚ್​.ಕೆ.ಶ್ರೀಕಂಠು ಮಾತನಾಡಿ, ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಗಾಳಿ, ಬಿಸಿಲು, ಮಳೆಯನ್ನದೆ ದೇಶಕ್ಕಾಗಿ ಹೋರಾಡುತ್ತಾರೆ. ಗಡಿಯಲ್ಲಿ ಹೋರಾಡಿ ನಮ್ಮನ್ನು ಕಾಯ್ದು ನಿವೃತ್ತಿಯಾಗಿ ಬಂದಿರುವುದು ಸಾಮಾನ್ಯ ಸಂಗತಿಯಲ್ಲ. ದೇಶ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಕಷ್ಟಕರ ಪರಿಸ್ಥಿತಿಯಲ್ಲೂ ದೇಶ ಕಾಯುವ ಸೈನಿಕರ ಸೇವೆ ಅನನ್ಯ ಎಂದರು.

ಇವರು ಸಾತನೂರು ರೂರಲ್​ ಕಾಲೇಜು ವಿದ್ಯಾರ್ಥಿಯಾಗಿದ್ದು, ಈಗ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದಿದ್ದಾರೆ. ಇಂತಹ ವೀರ ಯೋಧರನ್ನು ಸನ್ಮಾನಿಸುವುದು ಎಲ್ಲರ ಕರ್ತವ್ಯ. ಇದರಿಂದ ನಮಗೂ ನಮ್ಮ ಸಂಸ್ಥೆಗೂ ಗೌರವ ಹೆಚ್ಚಾಗಿದೆ ಎಂದರು.

ಆಧುನಿಕ ಸಮಾಜದಲ್ಲಿ ಪಾಲಕರು ತಮ್ಮ ಮಕ್ಕಳನ್ನು ವೈದ್ಯರು, ಇಂಜಿನಿಯರ್​ ಇತರ ಉನ್ನತ ಪದವಿ ಹಾಗೂ ಐಷಾರಾಮಿ ಜೀವನ ನಡೆಸಲು ಬಯಸುತ್ತಾರೆ ಹೊರತು ಸೇನೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಯಾರೂ ಇಚ್ಚಿಸುವುದಿಲ್ಲ. ಅದರಲ್ಲಿ ಶಿವಣ್ಣನಂತಹ ದೇಶಪ್ರೇಮಿಗಳು ವಿರಳವಾಗಿ ಸಿಗುತ್ತಾರೆ. ಇವರು ನಿವೃತ್ತರಾಗಿ ತಾಯ್ನಾಡಿಗೆ ಮರಳಿರುವುದು ದೇಶ ಹಾಗೂ ತಾಲೂಕಿಗೂ ಹೆಮ್ಮೆಯ ವಿಷಯ ಎಂದರು.

ನಿವೃತ್ತ ಯೋಧ ರಾಮಯ್ಯ ದೇಶಭಕ್ತಿ ಗೀತೆಯನ್ನು ಹಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಅಸೋಸಿಯೇಷನ್​ ಉಪಾಧ್ಯಕ್ಷ ಬಸವರಾಜು, ನಂದೀಶ್​, ರಾಮಕೃಷ್ಣ, ರಾಮಚಂದ್ರೆಗೌಡ, ಪದವಿ ಕಾಲೇಜು ಉಪಪ್ರಾಂಶುಪಾಲ ದೇವರಾಜ್​, ಸಂಸ್ಥೆಯ ನಿರ್ದೇಶಕ ಎನ್​ಸಿಸಿ ಅಧಿಕಾರಿ ವಿಜಯೇಂದ್ರ, ಉಪನ್ಯಾಸಕ ಸುಧಾಕರ್​, ಧಮ್ಮದಿವಿಗೆ ಚಾರಿಟಬಲ್​ ಟ್ರಸ್ಟ್​ ಮಲ್ಲಿಕಾರ್ಜುನ್​ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net