

ರೋಣ: ಆರೋಗ್ಯಯುಕ್ತ ಸಮಾಜ ನಿರ್ವಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಔಷಧ ವ್ಯಾಪಾರಸ್ಥರ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಸಹಾಯಕ ನಿಯಂತ್ರಕ ನೀಲಕಂಠ ರಾಠೋಡ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ರೋಣ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಸಹಾಯಕ ಔಷಧ ನಿಯಂತ್ರಕರು ಹಾಗೂ ಗದಗ ಜಿಲ್ಲಾ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕಾಯಿಲೆ ಶಮನ ಹಾಗೂ ತುರ್ತು ಸಂದರ್ಭದಲ್ಲಿ ಔಷಧ ಅತ್ಯಗತ್ಯ. ಈ ವೇಳೆ ಔಷಧ ವ್ಯಾಪಾರಸ್ಥರ ಹಾಗೂ ವಿತರಕರ ಸೇವೆ ಅನನ್ಯವಾದುದು. ಔಷಧ ವ್ಯಾಪಾರಸ್ಥರು ನಿಯಮಗಳನ್ನು ಪಾಲಿಸಬೇಕು’ ಎಂದರು.
ಔಷಧ ವ್ಯಾಪಾರಸ್ಥ ಸಂಜಯ ರಡ್ಡೇರ ಮಾತನಾಡಿ, ಔಷಧ ವ್ಯಾಪಾರಸ್ಥರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆಂಟಿ ಬಯೊಟಿಕ್ ಔಷಧಗಳು ಬಹುತೇಕ ನಕಲಿ ವೈದ್ಯರಿಗೆ ಪೂರೈಕೆಯಾಗುತ್ತಿದ್ದು, ಅದನ್ನು ತಡೆಯುವಲ್ಲಿ ಔಷಧ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೆಲ ವೈದ್ಯರು ಆರೋಗ್ಯ ತಪಾಸಣೆಯೊಂದಿಗೆ ಔಷಧಗಳನ್ನು ತಾವೇ ವಿತರಿಸುತ್ತಿದ್ದಾರೆ. ಈ ಪದ್ದತಿ ನಿಲ್ಲಬೇಕು. ವೈದ್ಯರು ಕೂಡ ಸಹಕರಿಸಬೇಕು ಎಂದರು.
ರಾಜ್ಯ ಸಂಘದ ಸದಸ್ಯ ಮಹಾದೇವಗೌಡ ಲಿಂಗನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಣ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ತಾಲೂಕಾಧ್ಯಕ್ಷ ಸಿ.ಎಸ್. ರಡ್ಡೇರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಹಾಗೂ ಔಷಧ ವಿತರಕ ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ ರಾಜ್ಯ ಸದಸ್ಯ ಎಂ.ಜಿ. ರಮಣಿ, ಜಿಲ್ಲಾ ಕಾರ್ಯದರ್ಶಿ ಜ್ಞಾನೇಶ ಖೋಕಲೆ, ಎಂ.ಡಿ. ಕಾಬಳ್ಳಿ, ವಿಶ್ವನಾಥ ವನಕಿಯವರ, ಬಿ. ಮಂಜುನಾಥರಡ್ಡಿ, ಜಿಲ್ಲಾ ಉಪಾಧ್ಯಕ್ಷ ಬಿ.ಬಿ. ಪರಡ್ಡಿ, ಸುರೇಶ ನಿಡಗುಂದಿ, ಎಸ್.ಆರ್. ನವಲಿ, ಉಮೇಶ ಮೆಣಸಗಿ, ರಮಜಾನಸಾಬ್ ನದಾಫ್, ಚಂದ್ರಗೌಡ ಪಾಟೀಲ, ಮಹೇಶ ಬಾಗಲಕೋಟಿ, ರಮೇಶ ಕಲಾರಿ, ಐ.ಜಿ. ಪಾಟೀಲ, ಶಶಿಧರ ಮಲ್ಲನಗೌಡ್ರ, ಇತರರು ಇದ್ದರು. ಶಿಕ್ಷಕ ಎಸ್.ಐ. ದಿಂಡೂರ ಕಾರ್ಯಕ್ರಮ ನಿರ್ವಹಿಸಿದರು.