ನರ್ಸ್‌ಗಳ ಸೇವೆ ಅತ್ಯಂತ ಪವಿತ್ರ

NARAGUND NURSE
Published on

ನರಗುಂದ: ಸಹನೆ, ತಾಳ್ಮೆ ಮತ್ತು ಪ್ರೀತಿ, ಗೌರವದಿಂದ ದಿನದ 24 ಗಂಟೆ ರೋಗಿಗಳ ಆರೈಕೆ ಮಾಡುತ್ತಿರುವ ನರ್ಸ್‌ಗಳ ಸೇವೆ ಅತ್ಯಂತ ಪವಿತ್ರವಾದದ್ದು ಎಂದು ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವರುಣ ಸವದಿ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಡಮಾಡುವ ರಾಜ್ಯಮಟ್ಟದ 2023ನೇ ಸಾಲಿನ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗೆ ಭಾಜನರಾಗಿರುವ ತಾಲೂಕು ಆಸ್ಪತ್ರೆ ಶುಶ್ರೂಷಕಿ ಭಾರತಿ ಪಾಟೀಲ ಹಾಗೂ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಈರಣ್ಣ ಮೇಟಿ, ಪ್ರದೀಪ ಅವರಿಗೆ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನರಗುಂದದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭಾರತಿ ಪಾಟೀಲ ಅವರು 5 ಸಾವಿರಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದ್ದಾರೆ.

ಲಾಕ್‌ಡೌನ್‌ನಲ್ಲಿ ಜಿವಿಕೆ ಸಂಸ್ಥೆ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಒಂದೂವರೆ ತಿಂಗಳ ಅವಧಿಯಲ್ಲಿ 39 ಬಡ ಮಹಿಳೆಯರಿಗೆ ಹೆರಿಗೆ ಮಾಡಿಸುವುದರ ಜತೆಗೆ ಆಸ್ಪತ್ರೆಗೆ ಸತತವಾಗಿ ಮೂರು ವರ್ಷ ಕಾಯಕಲ್ಪ ಪ್ರಶಸ್ತಿ ದೊರಕಲು ಕಾರಣೀಕರ್ತರಾಗಿದ್ದಾರೆ.

25 ವರ್ಷದ ಸೇವಾ ಅವಧಿಯಲ್ಲಿ ತಮ್ಮ ಮಗನನ್ನು ಇದೇ ಆಸ್ಪತ್ರೆಗೆ ವೈದ್ಯನನ್ನಾಗಿ ಮಾಡಿ ಬಡವರ ಸೇವೆಗೆ ಅಣಿಗೊಳಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರೇಣುಕಾ ಕೊರವನವರ ಮಾತನಾಡಿ, ಭಾರತಿ ಪಾಟೀಲ ಅವರು ತಾಯಂದಿರ ಮತ್ತು ಶಿಶುಗಳ ಮರಣ ಪ್ರಮಾಣ ತಡೆಗಟ್ಟಲು ಅತ್ಯಂತ ಜವಾಬ್ದಾರಿಯುತವಾಗಿ ನಿರಂತರ ಸೇವೆ ಸಲ್ಲಿಸಿರುವುದಕ್ಕೆ ರಾಜ್ಯ ಸರ್ಕಾರದಿಂದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ದೊರೆತಿರುವುದು ಆರೋಗ್ಯ ಸೇವೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದು ಎಲ್ಲ ಆರೋಗ್ಯ ಇಲಾಖೆ ನೌಕರರ ಒಗ್ಗಟ್ಟಿನ ಪರಿಶ್ರಮದ ಸಂಕೇತ. ಇಲಾಖೆಯಲ್ಲಿ ಯಾವುದೇ ಸಣ್ಣಪುಟ್ಟ ಸಮಸ್ಯೆಗಳು ಉಂಟಾದಾಗ ಪ್ರತಿಯೊಬ್ಬರೂ ನೈತಿಕವಾಗಿ ಬೆಂಬಲ ಸೂಚಿಸುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಭಾರತಿ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಡಾ.ರೂಪಾ, ಡಾ.ನಿಖಿಲ್ ಪಾಟೀಲ, ಡಾ.ಸಿ.ಆರ್. ಜಾಲಿಕೊಪ್ಪ, ಡಾ. ಪ್ರಮೋದ ಗುಣಗಾ, ಡಾ. ವೀಣಾ, ಸರೋಜಾ ಬಿರಾದಾರ, ಸುಜಾತಾ ಬೆಟಗೇರಿ, ಕಿರಣ ಜೋಶಿ, ತಸ್ಲೀಮಾ, ಪ್ರಕಾಶಗೌಡ ಪಾಟೀಲ, ಪ್ರಶಾಂತ ಕುಲಕರ್ಣಿ, ಮಲ್ಲಿಕಾರ್ಜುನ ಹಿರೇಮಠ, ಜಿ.ವಿ. ಕೊಣ್ಣೂರ, ವಿಕ್ರಂ ಭೂಸರಡ್ಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ನೀಲಕಂಠ ಮಡಿವಾಳರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net