

ಹುನಗುಂದ: ಹಲವಾರು ಸವಾಲಗಳನ್ನು ಎದುರಿಸಿ ಎಲ್ಲವನ್ನು ಸಹಿಸಿಕೊಂಡು ಮಾತೃ ಹೃದಯದಿಂದ ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರು ಸಲ್ಲಿಸುತ್ತಿರು ಸೇವೆಗೆ ಮತ್ತೊಂದು ಸಾಟಿ ಇಲ್ಲವೆಂದು ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಮಂಜುನಾಥ ಅಂಕೊಳ್ಕರ ಹೇಳಿದರು.
ಪಟ್ಟಣದ ಗೌರಮ್ಮ ಚರಂತಿಮಠ ವಿಜ್ಞಾನ ಮತ್ತು ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನ ನಿಮಿತ್ತ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ ಗರ್ಭದಿಂದ ಜನ್ಮ ತಾಳುವುದು ಒಂದೆಡೆಯಾದರೆ ವೈದ್ಯಕೀಯ ಕ್ಷೇತ್ರದಿಂದ ಮತ್ತೊಮ್ಮೆ ಜನಿಸಿದಂತೆ. ವಿಜ್ಞಾನ ತಂತ್ರಜ್ಞಾನದ ನಾಗಾಲೋಟದಲ್ಲಿ ಸಮಸ್ಯೆಗೆ ಪರಿಹಾರ ಒಂದೆಡೆ ಇದ್ದರೆ ವೈದ್ಯಕೀಯ ಕ್ಷೇತ್ರದ ಸಾಕಷ್ಟು ಸಂಕಷ್ಟ ಸ್ಥಿತಿಯ ಯಶಸ್ಸಿಗೆ ದಾದಿಯರ ಪಾತ್ರ ಮಹತ್ವದ್ದಾಗಿದೆ ಎಂದರು.
ಸಂಘದ ನಿರ್ದೇಶಕ ಅರುಣೋದಯ ದುದ್ಗಿ ಮಾತನಾಡಿ, ಸದ್ಯದ ಸ್ಥಿತಿಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಹಲವಾರು ಕಾಯಿಲೆಯಗಳಿಂದ ಬಳಲುತ್ತಿರುವವರಿಗೆ ಬಂಧುಗಳೇ ದೂರವಿರುವ ಸ್ಥಿತಿ ಬಂದಾಗ ಈ ಕ್ಷೇತ್ರದ ದಾದಿಯರ ಸೇವೆ ಸ್ಮರಣೀಯವಾಗಿದೆ. ಅಲ್ಲದೆ, ದಾದಿಯರು ತಮ್ಮ ಕುಟುಂಬದ ಆರೋಗ್ಯದ ಬಗ್ಗೆಯೂ ಅಷ್ಟೇ ಗಮನ ಹರಿಸಬೇಕು ಎಂದರು.
ಪ್ರಚಾರ್ಯ ಸಂಗಮೇಶ ಪಟ್ಟಣಶಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕೆಂದೂರ, ವೀರಣ್ಣ ಬಳೂಟಗಿ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.