ಕಾಯಕ ಯೋಗಿಗಳ ಸೇವೆ ಸ್ಮರಣೀಯ

HYR cmc 23
Published on

ಹಿರಿಯೂರು: ಸ್ವಚ್ಛತೆ ಹಾಗೂ ಜನರ ಸುರಕ್ಷತೆಗೆ ಹಗಲಿರುಳು ಶ್ರಮಿಸುವ ಪೌರ ಕಾರ್ಮಿಕರ ಸೇವೆ ಅನನ್ಯವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಪೌರ ಕಾರ್ಮಿಕರ ದಿನ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕಾರ್ಮಿಕರ ಶ್ರಮದಿಂದ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರು ಕಾಯಕ ಯೋಗಿಗಳನ್ನು ಗೌರವಿಸಬೇಕು. ಕಾರ್ಮಿಕ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ಪೌರಾಯುಕ್ತ ಎಚ್.ಮಹಾಂತೇಶ್ ಮಾತನಾಡಿ, ದಕ್ಷಿಣ ಕಾಶಿ ಖ್ಯಾತಿಯ ಹಿರಿಯೂರು ಪ್ರಮುಖ ಪ್ರವಾಸಿ ತಾಣ, ಸ್ವಚ್ಛತೆ, ಜನರ ಸುರಕ್ಷತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗದು. ಕಾರ್ಮಿಕರ ಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಪೌರ ಕಾರ್ಮಿಕರು ಉತ್ಸಾಹದಿಂದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಕ್ರೀಡಾ ಕೌಶಲ್ಯ ಮೆರೆದರು. ವಿವಿಧ ಕ್ರೀಡೆಯಲ್ಲಿ ವಿಜೇತರಾದ ಕಾರ್ಮಿಕರಿಗೆ ಸಚಿವ ಸುಧಾಕರ್ ಬಹುಮಾನ ವಿತರಿಸಿದರು.

ನಗರಸಭೆ ಸದಸ್ಯರಾದ ಪ್ರಕಾಶ್, ಅಜ್ಜಪ್ಪ, ಶಿವರಂಜನಿ, ಈರಲಿಂಗೇಗೌಡ, ಪೌರ ನೌಕರರ ಸಂಘದ ತಾಲೂಕಾಧ್ಯಕ್ಷ ದುರ್ಗೇಶ್, ಆರೋಗ್ಯ ನಿರೀಕ್ಷಕ ಸುನೀಲ್, ಜನಾರ್ಧನ್, ಹರ್ಷಕುಮಾರ್, ಮೀನಾಕ್ಷಿ, ಸಂಧ್ಯಾ, ಪಿ.ಎಸ್.ಸಾದತ್ ಉಲ್ಲಾ, ಖಾದಿ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net