ಕುದೂರು: ಸಾಮಾಜಿಕ ವ್ಯವಸ್ಥೆಯಲ್ಲಿ ಪುರಾತನ ಕಾಲದಿಂದಲೂ ಗುರುಕುಲಗಳು ಮತ್ತು ಮಠಮಾನ್ಯಗಳು ಸಲ್ಲಿಸಿರುವ ಸೇವೆ ಅಪಾರವಾದದ್ದು ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಸೋಲೂರು ಹೋಬಳಿಯ ಕಂಚುಗಲ್ ಬಂಡೇಮಠದಲ್ಲಿ ಲಿಂಗೈಕ್ಯ ಶ್ರೀ ಶಿವರುದ್ರ ಮಹಾಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠಗಳು ಜ್ಞಾನಾರ್ಜನೆ ಮತ್ತು ಸಂಸ್ಕಾರ ಸೇರಿ ಅನೇಕ ತತ್ವಗಳನ್ನು ಮೈಗೂಡಿಸುವ ಕೆಲಸ ಸಹಸ್ರಾರು ವರ್ಷಗಳಿಂದ ಮಾಡುತ್ತಾ ಬಂದಿವೆ. ಇಂತಹ ಭವ್ಯ ಪರಂಪರೆಗಳಲ್ಲಿ ತನ್ನದೇ ಆದ ವಿಶಿಷ್ಟತೆ ಮೂಲಕ ದೀನ ದಲಿತರಿಗೆ, ಬಡವರಿಗೆ ಉಚಿತ ವಿದ್ಯಾರ್ಥಿ ನಿಲಯ ಪ್ರಾರಂಭಿಸಿ ವಿದ್ಯಾದಾನ ಮಾಡಿದ ಕೀರ್ತಿ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಗುರು ಪರಂಪರೆಗೆ ಸಲ್ಲುತ್ತದೆ ಎಂದರು.
ಬಂಡೇಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಹಿಂದಿನ ಸ್ವಾಮೀಜಿಯವರು ನಡೆಸುತ್ತಿದ್ದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಚಿಕ್ಕಮಸ್ಕಲ್ ಮಠದ ಬಸವಲಿಂಗ ಸ್ವಾಮೀಜಿ, ಗುರುವಣ್ಣ ದೇವರ ಮಠದ ಶ್ರೀ ನಿಜಗುಣ ಸ್ವಾಮೀಜಿ, ನೆಲಮಂಗಲದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಗದ್ದುಗೆ ಮಠದ ಶ್ರೀ ಮಹಾಂತ ಸ್ವಾಮೀಜಿ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಶಿವರುದ್ರಪ್ಪ ಸೇರಿ ಹಲವು ಗ್ರಾಮಸ್ಥರು ಇದ್ದರು.