

ನರಗುಂದ: ಕಟ್ಟಡ ಕಾರ್ಮಿಕರ ಸೇವೆ ಶ್ಲಾಘನೀಯವಾದುದು. ಪರಿಣಿತ ಕಾರ್ಮಿಕರ ಪರಿಶ್ರಮ, ಅನುಭವದಿಂದ ಸುಂದರ ನಾಡು, ನಗರಗಳ ನಿರ್ಮಾಣವಾಗುವುದರ ಜತೆಗೆ ಸಮಾಜದ ಪ್ರತಿಯೊಂದು ಕ್ಷೇತ್ರಗಳ ಅಭಿವೃದ್ಧಿಗೆ ಬಹುಮುಖ್ಯ ಕಾರಣರಾಗಿದ್ದಾರೆ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ತಾಲೂಕು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಕಟ್ಟಡ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ವ್ಯಸನಮುಕ್ತರಾದರೆ ಕುಟುಂಬದ ಹಣಕಾಸಿನ ಸಮಸ್ಯೆ ಹರಿಹರಿಸಿಕೊಳ್ಳಲು ಸಾಧ್ಯವಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ನೇರವಾಗಿ ಕಾರ್ಮಿಕರ ಮನೆಗಳಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಾರ್ಮಿಕರ ಕುಟುಂಬಗಳಿಗೆ ದೊರೆಯುವ ವಿವಿಧ ಯೋಜನೆಗಳ ಸೌಲಭ್ಯ, ಹಕ್ಕು ಮತ್ತು ಅವರ ಕರ್ತವ್ಯಗಳ ಮಾಹಿತಿ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಬೇಕು. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ 4 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಾರ್ಮಿಕರ ಕಲ್ಯಾಣ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಕಟ್ಟಡ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಉದ್ಘಾಟಿಸಲಾಗುತ್ತದೆ ಎಂದರು.
ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಮಾತನಾಡಿ, ತಾಲೂಕಿನ 80 ಗೌಂಡಿ, 33 ಇಲೆಕ್ಟ್ರಿಷಿಯನ್, 55 ಟೈಲ್ಸ್, ರೋಡ ಕನ್‌ಸ್ಟ್ರಕ್ಷನ್ ಸೇರಿದಂತೆ ಒಟ್ಟು,480 ಕಾರ್ಮಿಕರಿಗೆ ಕಿಟ್ ವಿತರಿಸಲಾಗುತ್ತಿದೆ ಎಂದರು.
ಜಿಲ್ಲಾ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ಸಂದೇಶ ಪಾಟೀಲ, ತಾಲೂಕು ಕಾರ್ಮಿಕ ನಿರೀಕ್ಷಕಿ ಪೂಜಾ ಶಿಂಧೆ, ಡಾ.ಪ್ರಭು ನಂದಿ, ಸಂಗೀತ ಪೂಜಾರ, ಬಿ.ಬಿ. ಐನಾಪೂರ, ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ಸಿದ್ದಪ್ಪ ಯಲಿಗಾರ, ಎಂ.ಎಚ್. ತಿಮ್ಮನಗೌಡ್ರ, ಆರ್.ಬಿ. ಅಳಗವಾಡಿ, ಹನುಮಂತ ಚಿತ್ರಗಾರ, ಫಾರೂಕ್ ಲೋಧಿ, ಗಂಗಮ್ಮ ಸಂಗಳಮಠ, ಬಸವರಾಜ ಪಾಟೀಲ, ಸಂತೋಷ ಹಂಚಿನಾಳ, ಸಂಗನಗೌಡ ಹಾಲಗೌಡ್ರ, ಪವಾಡೆಪ್ಪ ವಡ್ಡಿಗೇರಿ, ಬಸವರಾಜ ಹುಲಕುಂದ, ಬಸವರಾಜ ಮಳಗಿ, ಇತರರಿದ್ದರು.