

ಎನ್.ಆರ್.ಪುರ: ಪಟ್ಟಣದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಹೇಳಿದರು.
ಪಪಂನಲ್ಲಿ ಸೋಮವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸ್ವಚ್ಛತೆಯನ್ನು ಕಾಪಾಡುವ ಕೆಲಸ ಪೌರಕಾರ್ಮಿಕರು ಮಾಡಿದ್ದಾರೆ. ಇವರು ಮಾಡುವ ಕೆಲಸ ಬೇರ‌್ಯಾರೂ ಮಾಡಲು ಸಾಧ್ಯವಿಲ್ಲ. ಪೌರಕಾರ್ಮಿಕರ ಉಪಾಹಾರ ಭತ್ಯೆಯನ್ನು ಸರ್ಕಾರ 20ರೂ.ನಿಂದ 35 ರೂ.ಗೆ ಹೆಚ್ಚಿಸಿದೆ. ಉಪಾಹಾರದಲ್ಲಿ ಮೊಟ್ಟೆ ಕೊಡಲು ತೀರ್ಮಾನಿಸಿದೆ. ಪೌರಕಾರ್ಮಿಕರಿಗೆ ಆರೋಗ್ಯ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸ ಸೌಲಭ್ಯ ನೀಡುತ್ತಿದೆ. ಪಪಂನಿಂದ ವಸತಿರಹಿತ ಪೌರಕಾರ್ಮಿಕರಿಗೆ ಆಶ್ರಯ ಬಡಾವಣೆಯಲ್ಲಿ ನಿವೇಶನ ಮೀಸಲಿಡಲಾಗಿದೆ. ಪೌರಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ನೀಡಲು ಸರ್ಕಾರ ನಿರ್ಧರಿಸಿದೆ. ಹಲವು ಪೌರಕಾರ್ಮಿಕರ ಸೇವೆ ಕಾಯಂಗೊಳಿಸಲಾಗಿದೆ ಎಂದರು.
ಸಫಾಯಿ ಕರ್ಮಚಾರಿ ಹಾಗೂ ಪುನರ್ ವಸತಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ಎಂ.ವಿ.ಭವಾನಿ ಮಾತನಾಡಿ, ಸಾಮಾಜಿಕ ಕಾರ್ಯಕರ್ತರಾಗಿರುವ ಪೌರಕಾರ್ಮಿಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಚಿಕ್ಕವಯಸ್ಸಿನಲ್ಲಿ ಮರಣ ಹೊಂದುತ್ತಿದ್ದಾರೆ. ಸಾಲಪ್ಪನವರ ಪೌರ ಸಮಿತಿ ಸಲ್ಲಿಸಿದ ವರದಿಯ ಕೆಲವು ಅಂಶಗಳ ಅನುಷ್ಠಾನದಿಂದ ಪೌರಕಾರ್ಮಿಕರಿಗೆ ಹಲವು ಸೌಲಭ್ಯಗಳು ಲಭ್ಯವಾಗುತ್ತಿವೆ. ಪೌರಕಾರ್ಮಿಕರ ಮಕ್ಕಳಿಗೆ ಶಿಕ್ಷಣದಲ್ಲಿ ಶೇ.20 ಮೀಸಲಾತಿಯಿದೆ ಎಂದು ಹೇಳಿದರು.
ಪಪಂ ಸದಸ್ಯೆ ಜುಬೇದಾ ಮಾತನಾಡಿ, ಗುತ್ತಿಗೆ ಪೌರಕಾರ್ಮಿಕರ ಸೇವೆ ಕಾಯಂಗೊಳಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರಕಾರ್ಮಿಕ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಪಂ ಸದಸ್ಯ ಮುಕುಂದ ಮಾತನಾಡಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪಪಂ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯರಾದ ಆರ್.ಕುಮಾರಸ್ವಾಮಿ, ಸೈಯದ್ ವಸೀಂ, ಪಿ.ಜೆ.ಶೋಜಾ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಲಕ್ಷ್ಮಣೇಗೌಡ, ಕಂದಾಯ ನಿರೀಕ್ಷಕ ವಿಜಯಕುಮಾರ್, ಲೆಕ್ಕ ಅಧೀಕ್ಷಕಿ ಉಷಾ, ಚಂದ್ರಶೇಖರ್, ಶ್ರುತಿ, ಎನ್.ಮಮತಾ ಇತರರಿದ್ದರು.